Bhasaka
← Back to home

ದಾಶರಥ ಪಾದಸರಸಿಜ ಮಧುಕರ

Author: ವಿಜಯದಾಸCategory: ಶ್ರೀರಾಮ
ದಾಶರಥ ಪಾದಸರಸಿಜ ಮಧುಕರ ಸಮೀರಜ ಹನುಮ ಎನ್ನ ಪ್ರಾಣಾಪದಕಾ ಶಿರಸನಾ ಮಗಗೊಲಿದು ರಾಮಚಂದ್ರನ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ||1|| ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ ||2|| ಸಭೆಯೊಳಗೆ ರಾವಣನ ರಕ್ತವನೆ ಕಾರಿಸಿದೆ ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ ||3|| ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ ||4|| ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ ||5|| ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ ||6|| ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ||7||

Thoughts & Reflections

0

No reflections shared yet. Be the first to share your thoughts!

Share your thought