Bhasaka
← Back to home

ದುರಿತ ದುರ್ಗತಿಗೆ ಆವಾನಂಜನೊ

Author: ವಿಜಯದಾಸCategory: ಶ್ರೀಕೃಷ್ಣ
ದುರಿತ ದುರ್ಗತಿಗೆ ಆವಾನಂಜನೊ ಹರಿಯ ಕರುಣವೆಂಬ ಕವಚ ತೊಟ್ಟಿರಲಿಕ್ಕೆ ಮಲಗಿ ಹೊರಳನೇಕೆ ಕುಳಿತುಕೊಂಡಿರನೇಕೆ ಬಲುದೂರ ತಿರುಗಾಡಿ ಬಪ್ಪನೇಕೆ ಮಲಿನ ವಸನವ ಪೊದ್ದು ಮೋರೆ ತೊಳಿಯನೇಕೆ ಜಲಜನಾಭನ ಪಾದ ನೆಳಲು ಸೇರಿದವ ||1|| ಸ್ನಾನ ಸಂಧ್ಯಾ ಮೌನ ಮಾಡದೆ ಇರನೇಕೆ ಕಾನನದಲಿ ಬಂದು ಸೇರನೇಕೆ ದಾನ ಧರ್ಮಂಗಳ ಮಾಡದೆ ಇರನೇಕೆ ದಾನವಾರಿಯ ಕಾಣುತಲಿಪ್ಪವ ||2|| ಮಡಿ ಉಡದೆ ಉಣನೇಕೆ ಅಡಿಗೆ ನೇಮನವೇಕೆ ಅಡಿಗಡಿಗೆ ಜಪಮಣಿ ಎಣಿಸನೇಕೆ ನಡೆಯುತ ಪಥದೊಳು ತಿನ್ನಲ್ಲಾ ಮೆಲ್ಲನೇಕೆ ಪೊಡವೀಶ ಶ್ರೀ ಹರಿಯ ಅಡಿಗಳ ಬಲ್ಲವಾ ||3|| ಓದದೆ ಇರನೇಕೆ ವೇದ ಪಠಿಸನೇಕೆ ವೇದಮಂತ್ರ ರಚಿಸದರನೇತಕೆ ಓದನವೀಯದೆ ಬಾಳುತಲಿ ಇರನೇಕೆ ಮಾಧವನ ಚರಣಾರಾಧನೆ ಮಾಳ್ಪ ||4|| ತೀರ್ಥ ತಿರುಗನೇಕೆ ಯಾತ್ರಿ ಚರಿಸನೇಕೆ ವ್ಯರ್ಥ ದಿವಸವೆಂದು ಅನಿಸಲೇಕೆ ಆರ್ಥಿಯನ್ನು ನೋಡಿ ಆಟ ಆಡುವನೇಕೆ ತೀರ್ಥಪದನ ದಿವ್ಯತೀರ್ಥ ಬಯಸುವವ ||5|| ವ್ರತವು ಮಾಡನೇಕೆ ಕಥಿಯ ಕೇಳನೇಕೆ ಸತಿಯ ಸಂಗಡ ನಿತ್ಯರಮಿಸನೇಕೆ ಚತುರ ಸಾರೆ ಉಂಡು ಹಾಗೇ ಇರನೇಕೆ ಪತಿತಪಾವನನಂಘ್ರಿ ಮತಿಯಲ್ಲಿ ನೋಳ್ಪನಾ||6|| ದುರಿತವೆಂಬೋದೆಂತು ಬಿಳಿದೊ ಹಸರೊ ಕೆಂಪೊ ಕರದೊ ಮತ್ತಾವದೋ ಅದರ ವರ್ಣಾ ದುರಿತಾರಿ ವಿಜಯವಿಠ್ಠಲನ್ನದಾಸಗೆ ತನ್ನ- ತೊರೆದು ಕಾಣೊ ಹಣೆ ನೋಡದೆ ಮಹಾ ||7||

Thoughts & Reflections

0

No reflections shared yet. Be the first to share your thoughts!

Share your thought