Bhasaka
← Back to home

ಧ್ಯಾನವನು ಮಾಡು ಬಿಂಬ ಮೂರುತಿಯ

Author: ವಿಜಯದಾಸCategory: ಶ್ರೀಕೃಷ್ಣ
ಧ್ಯಾನವನು ಮಾಡು ಬಿಂಬ ಮೂರುತಿಯ ಆನಂದದಲಿ ಕುಳಿತು ಅಂತರಂಗದಲಿ ಸದಾಚಾರನಾಗಿ ದ್ವಾದಶಗುರುಗಳಿಗೆರಗಿ ಮುದದಿಂದ ಮೂಲಮಂತ್ರವನು ಜಪಿಸಿ ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು ಪದಮಾಸನವ ಹಾಕಿ ಪರಮ ವಿಶ್ವಾಸದಲಿ||1|| ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು ಮಂಗಳ ಶೋಭಿತ ಅಖಂಡ ಧ್ಯಾನದಂತ ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ ||2|| ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ ಮಗುಳೆ ಪರಮ ಗುರುವಿನ ಮೂರ್ತಿಗೆ ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು||3|| ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ ಭರದಿಂದ ಎಲ್ಲವನು ತಂದು ಹೃದಯದಲ್ಲಿ ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು ||4|| ಆತನೆ ಬಿಂಬ ಮೂರುತಿಯೆಂದು ತಿಳಿದುಕೊ ಆ ತರುವಾಯ ನಾಡಿಗಳ ಗ್ರಹಿಸಿ ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ ||5|| e್ಞÁನ ಪ್ರಕಾಶದಲಿ ಇದ್ದು ನಿನ್ನ ಹೃದಯ ಸ್ಥಾನದಲ್ಲಿ ಅಷ್ಟದಳ ಕಮಲ ಮಧ್ಯ ಶ್ರೀನಿವಾಸನ ಮೂರ್ತಿ ನಿಲ್ಲಿಸಿ ಬಾಹ್ಯದಲಿ ಏನೇನು ಪೂಜೆಯನು ಉಳ್ಳದನು ಮಾಡೊ||6|| ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು ಕ್ಷಣ ಕ್ಷಣಕೆ ಹರಿಪಾದವನು ನೋಡುತ ಅಣುರೇಣು ಚೇತನಾಚೇತನಕೆ ನೇಮಕ ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು ||7|| ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ ||8|| ಈ ಪರಿ ಧೇನಿಸಲು ದೇವ ಕರುಣನ ಮಾಡೆ ಪಾಪ ಸಂಚಿತವು ಪ್ರಾರಬ್ಧ ನಾಶ ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು ಗೋಪಾಲ ವಿಜಯವಿಠ್ಠಲನೊಲಿವನಾಗ||9||

Thoughts & Reflections

0

No reflections shared yet. Be the first to share your thoughts!

Share your thought