Bhasaka
← Back to home

ಧ್ಯಾನಿಸು ಶ್ರೀಹರಿಯ ಧ್ಯಾನಿಸು

Author: ವಿಜಯದಾಸCategory: ಶ್ರೀಕೃಷ್ಣ
ಧ್ಯಾನಿಸು ಶ್ರೀಹರಿಯ ಧ್ಯಾನಿಸು ಧ್ಯಾನಿಸು ಮನವೆ ಶ್ರೀ ಹರಿಯ ಪಾದ ಧ್ಯಾನವಂತರ್ಯಾಮಿ ಹರಿಯ, ಆಹ ಪ್ರಾಣಾಪಾನ ವ್ಯಾನೋದಾನ ಸಮಾನರ್ಗೆ ಪ್ರಾಣನಾಗಿಹ ಮುಖ್ಯ ಪ್ರಾಣಾಂತರ್ಗತನ ಪರಮಾಣು ಪ್ರದೇಶದಲ್ಲಿ, ಪ್ರಾಣಿ ರಾಸಿ ಅನಂತವುಂಟಲ್ಲಿ ಹೀಗೆ ವರಲುತಿದೆ ವೇದದಲ್ಲಿ ದೃಷ್ಟಾಂ ತರವ ಪೇಳುವೆ ದೃಢದಲ್ಲಿ-ಆಹ ಪರಮ ಸೂಕ್ಷ್ಮ ವಟತರು ಫಲದಲ್ಲಿಹ ಪರಿಮಿತಲ್ಲದ ಬೀಜದಿರವನರಿತು ನಿತ್ಯ ||1|| ನಿರುತ ಸುವರಣ ಬ್ರಹ್ಮಾಂಡದಲ್ಲಿ ಪರಿಪೂರ್ಣವಾಗಿ ಅಖಂಡವಾಗಿ ಮೆರೆವುತಲಿಪ್ಪ ಮಾರ್ತಾಂಡ ದಿವ್ಯ ಕಿರಣದಂತಿರುವ ಪ್ರಚಂಡ-ಆಹ ಹೊರಗೆ ಒಳಗೆ ಹರಿ ಚರಿಸುವ ಪರಿಯ ನೀ ನರಿತು ಆವಾಗಲು ದೊರಕಿದ ಸ್ಥಳದಲ್ಲಿ ||2|| ಸಲಿಲ ಭೂಗಿರಿ ಲತೆ ನಾನಾ-ವೃಕ್ಷ ಫಲ ಮೃಗ ಪಕ್ಷಿ ಕಾನನ-ಮುಕ್ತ ಸ್ಥಳಗಳವ್ಯಾಕೃತ ಗಗನ, ತೃಣ- ಜಲ ಪಾವಕ ತರು ಪವನ-ಆಹ ಒಳಗೆ ಹೊರಗೆ ಎಲ್ಲ ಸ್ಥಳದಲ್ಲಿ ಹರಿಮಯ ನೆಲೆಯ ನೀ ನಲವಿಂದ ತಿಳಿದು ಆವಾಗಲು||3|| ಕೇಶವ ವಿಶ್ವ ಮತ್ಸ್ಯಾದಿ, ತೇಜೊ ರಾಶಿ ಹಯಗ್ರೀವಾದಿ, ಜೀವ ರಾಶಿಯೊಳಿದ್ದು ಅನಾದಿ ಸರ್ವ ದೇಶ ಭೇದಿಸುವಂಥ ವೇದಿ-ಆಹ ಈ ಸಮಸ್ತ ಮೂರ್ತಿ ಶ್ರೀಶ ರಂಗನೆಂದು ವಾಸನಾ ಮಯದಿಂದ ನೀ ಸೇವಿಸುತ ನಿತ್ಯ ||4|| ಸಪ್ತಾವರಣ ದೇಹದಲ್ಲಿ, ದಶ ಸಪ್ತ ದ್ವಿಸಹಸ್ರ ನಾಡಿಯಲಿ, ದಶ ಸಪ್ತ ದ್ವಿಸಹಸ್ರ ರೂಪದಲಿ ಹರಿ ವ್ಯಾಪ್ತ ನಿರ್ಲಿಪ್ತ ಸ್ಥಾನದಲಿ-ಆಹ ಆಪ್ತನಂತಿಪ್ಪ ಸುಷುಪ್ತಿ ಜಾಗರದೊಳು ತಪ್ತ ಕಾಂಚನದಂತೆ ದೀಪ್ತಿಸುತಿಪ್ಪನ್ನ||5|| ಜೀವರಿಂದತ್ಯಂತ ಭೇದ, ಪ್ರತಿ ಜೀವಾಂತರದಲ್ಲಿ ಮೋದನಾಗಿ ಯಾವಾಗಲಿರುತಿಹ ವೇದ-ದಲ್ಲಿ ಪೇಳುವುದು ಸತ್ಯಂಭಿದಾ-ಆಹ ಈ ವಿಧ ವೇದಾರ್ಥ ಸಾವಧಾನದಿ ತಿಳಿದು ಶ್ರೀ ವಾಯುಮತದ ಸುಕೋವಿದರೊಡಗೂಡಿ ||6|| ಶ್ರೀಕೇಶವನೆ ಮೂಲರಾಶಿ, ಶ್ರುತಿ- ಏಕೋ ನಾರಾಯಣ ಆಸೀತ್ ನಾನಾ ಲೋಕ ಸೃಷ್ಟಿಪ ಧಾತನಾಸೀತ್, ಜಗ ದೇಕತಾರಕ ಉಪದೇಶೀ-ಆಹ ನೀ ಕೇಳಿ ನಿಗಮಾರ್ಥ ನೀಕರಿಸು ಸಂಶಯ ಏಕಮೇವ ದ್ವಿತಿಯ ಶ್ರೀಕೃಷ್ಣನಂಘ್ರಿಯ ||7|| ಗಂಗಾಜನಕ ಸಿರಿರಂಗ ಉ- ತ್ತುಂಗ ಗುಣಾಂತರಂಗ, ಕಾ ಳಿಂಗ ಸರ್ಪನ ಮದಭಂಗ, ಭು ಜಂಗಶಯನ ಅಮಲಾಂಗ-ಆಹ ಮಂಗಳ ಇಡಾ ಪಿಂಗಳ ಸುಷುಮ್ನ ಸಂಗಡ ಮಧ್ಯದಿ ತಿಂಗಳಂತಿಪ್ಪನ್ನ ||8|| ಹೃದಯಸ್ಥಾನದಲಿದ್ದ ಮೂರ್ತಿ, ಬಲು ಅದುಭುತಾತನ ದಿವ್ಯಕೀರ್ತಿ, ಅದು ಪದುಮುಜಾಂಡದಿ ಪರಿಪೂರ್ತಿ ತರು ವುದಕೆ ಬೇಕು ವಾಯು ಸಾರಥಿ-ಅಹಾ ಅದು ಬಿಂಬಮೂರ್ತಿ ಜೀವದಾಕಾರಾವಾಗಿದ್ದ ಪದುಮಕೋಶದಲ್ಲಿ ಸದಮಲಾತ್ಮಕನನ್ನು ||9|| ಧರೆಯನಳೆದ ದಿವ್ಯ ಚರಣ, ಅದು ಮೆರೆವುತಿಹುದು ಕೋಟಿ ಅರುಣನಂತೆ ಪರಿಪೂರ್ಣ ಭರಿತವು ಕಿರಣ, ಸ್ಮರಿ- ಪರಿಗೆ ಮಾಡುವುದು ಕರುಣ-ಆಹ ತರಣಿಯಂಥ ನಖದಿ ಸುರನದಿಯನು ಹೆತ್ತ ಎರಡೈದು ಬೆರಳಲ್ಲಿ ಕಿರುಗೆಜ್ಜೆ ಪೆಂಡೆಯು ||10|| ಪೆರಡು ಜಾನು ಜಂಘೆ ಘನ್ನ ಸುರು- ಚಿರ ವಜ್ರಾಂಕುಶ ಧ್ವಜ ನಾನಾ, ದಿವ್ಯ ವರ ರೇಖೆಯಿಂದಲೊಪ್ಪುವನ, ಜಘನ ಪರಮ ಶೋಭಿತ ಸುಂದರನ-ಆಹ ಉರುಟು ಕದಳಿ ಕಂಬ ಇರುವೂರು ಶೋಭಿಸೆ ಸರಿಗಾಣೆ ಹರಿವುಟ್ಟ ವರ ಪೀತಾಂಬರವನ್ನು ||11|| ಗಜವೈರಿಯಂತಿಪ್ಪ ಮಧು ಬಲು ವಿಜಯ ವಡ್ಯಾಣ ಅಚ್ಛೇದ್ಯ, ಭೇದ್ಯ ನಿಜಘಂಟೆ ಘಣರೆಂಬೊ ವಾದ್ಯ, ಕು ಬುಜೆ ಡೊಂಕ ತಿದ್ದದನಾದ್ಯ-ಆಹ ಅಜ ಜನಿಸಿದ ನಾಭ್ಯಂಬುಜದಳ ಚತುರ್ದಶ ತ್ರಿಜಗ ಭರಿತ ಕುಕ್ಷಿ ನಿಜಪೂರ್ಣ ಸಖನನ್ನು ||12|| ಉದರ ತ್ರಿವಳಿ ನಾನಾ ಹಾರ ದಿವ್ಯ ಪದಕ ಪವಳದ ವಿಸ್ತಾರ ರತ್ನ ಮುದದಿಂದ ಧರಿಸಿದ ಧೀರ ಸುಂದರ ವಾದ ಕಂಬುಕಂಧರ-ಆಹಾ ಪದುಮಜ ಭವರಿಂದ ತ್ರಿದಶರು ತಿಳಿಯುತ್ತ ಸದಾಕಾಲ ಧ್ಯಾನಿಪ ಹೃದಯಾಂಬರವನ್ನು ||13|| ಸಿರಿವತ್ಸ ಕೌಸ್ತುಭಹಾರ, ಮೇಲೆ ಸರಿಗೆ ನ್ಯಾವಳದ ವಿಸ್ತಾರ ಅಲ್ಲಿ ಉರ ವೈಜಯಂತಿ ಮಂದಾರ, ಗುರು ತರವಾದ ಭುಜ ಚತುರ-ಆಹ ಮರಿಯಾನೆ ಸೊಂಡಿಲಂತಿರೆ ಬಾಹು ಕೇತಕಿ ಬೆರಳು ನಕ್ಷತ್ರದ ಅರಸಿನಂತೆ ನಖ||14|| ಕರಚತುಷ್ಟಯದಲ್ಲಿ ಶಂಖ, ಚಕ್ರ ವರಗದೆ ಪದುಮು ನಿಶ್ಶಂಕನಾಗಿ ಧರಿಸಿ ಮೆರೆವೊ ಅಕಳಂಕ, ದುರು ಳರ ದಂಡಿಸುವ ಛಲದಂಕ ಆಹ ಬೆರಳು ಮಾಣಿಕದುಂಗುರ ಕಡಗ ಕಂಕಣ ಬಿರುದಿನ ತೋಳ್ಬಂದಿ ವರ ಭುಜಕೀರ್ತಿಯ||15|| ಅಗರು ಚಂದನ ಗಂಧಲೇಪ, ಕಂಬು ಸೊಗಸಾದ ಕಂಠಪ್ರತಾಪ, ಮಾವು ಚಿಗುರಲೆ ಕೆಂದುಟಿ ಭೂಪ, ನಸು ನಗುವ ವದನ ಸಲ್ಲಾಪ-ಆಹ ಮಗನಾಗಿ ತಾನು ಗೋಪಿಗೆ ವದನದೊಳು ಜಗವೆಲ್ಲ ತೋರಿದ ಅಗಣಿತ ಮಹಿಮನ್ನ ||16|| ಮುಗುಳು ಮಲ್ಲಿಗೆ ಮೊಗ್ಗೆ ದಂತ ಜಗವ ಮೋಹಿಸುವ ಸುಶಾಂತ ಜಿಹ್ವೆ ನಿಗಮಕೆ ವೇದ್ಯವಾದಂಥ ಬಲು ಬಗೆಯಿಂದ ನಡೆಸುವ ಪಂಥ-ಆಹ ಪೊಗಳಲಾರದು ವೇದ ಖಗವಾಹನನ ಮಹಾ ಅಗಣಿತ ಮಹಿಮೆ ಸಂಪಿಗೆಯ ನಾಸಿಕನನ್ನು ||17|| ಪೊಳೆವೊ ವಿದ್ಯುತ ಕಪೋಲ, ನೀಲೋ- ತ್ಪಲದಳ ನೇತ್ರ ವಿಶಾಲ, ದಿವ್ಯ- ತಿಲಕವನಿಟ್ಟ ಸುಫಾಲ, ನೀಲಾ- ಚಲಕಾಂತಿ ತನುರುಹ ಜಾಲ-ಆಹ ಹೊಳೆವ ಕುಂಡಲ ಕರ್ಣದೊಲುಮೆಯ ಚೆಲುವಿಕೆ ಇಳೆಯೊಳಗೆಣೆಗಾಣೆ ಇಂದಿರಾಲೋಲನ್ನ ||18|| ಕರುಣ ಶಾಂತ ಶುಭ ನೋಟ, ಕಂಗ- ಳೆರಡ ಚೆಲುವಿಕೆ ಮಾಟಕಿನ್ನು ಅರವಿಂದ ಸರಿಯಿಲ್ಲ ದಿಟ ಅಲ್ಲಿ ತರಣಿ ಚಂದ್ರಮರ ಕೂಟ-ಆಹ ಶರಣ ಜನರ ಮನೋಹರುಷ ವಾರ್ಧಿಗೆ ಸುಧಾ ಕರ ದುಷ್ಟಜನರ ತಿಮಿರಕ್ಕೆ ಭಾಸ್ಕರನ್ನ ||19|| ಹೊಳೆವ ಹುಬ್ಬುದ್ವಯ ಸ್ಮರನ ಚಾಪ- ತಲೆ ತಗ್ಗಿಸುವಂಥ ರಚನ ಫಾಲ- ದಲ್ಲಿಟ್ಟು ತಿಲಕ ಸುಂದರನ ಲೋಕ- ಕಳವಳಗೊಳಿಸುವ ಸುಗುಣ-ಆಹ ನಲಿವ ವದನದಲ್ಲಿ ಅಳಿಗಳಂತೊಪ್ಪುವ ಸುಳಿಗುರುಳಿನ ಮೇಲೆ ವಲಿವಾರಳೆಲೆಯನ್ನು ||20|| ರೂಪ ಶೃಂಗಾರ ವಿಲಾಸ ಉಡು- ಭೂಪ ನಾಚುವ ಮುಖಹಾಸ ವಿಶ್ವ ರೂಪ ಧೃತ ಸ್ವಪ್ರಕಾಶ ಸರ್ವ ವ್ಯಾಪಕಾಖಿಳ ಜಗದೀಶ-ಆಹ ತಾಪಸರಿಗೆ ಕರುಣಾಪಯೋನಿಧಿ-ಅಣು ರೂಪಿನೋಳ್ ಪರಮಾಣು ರೂಪನಾಗಿಪ್ಪನ್ನ||21|| ಕೋಟಿಮಾರ್ತಾಂಡ ಸಂಕಾಶ ಕಿ ರೀಟಕ್ಕೆ ಅಸಮ ಪ್ರಕಾಶ ಎಲ್ಲು ಸಾಟಿಗಾಣೆನು ಲವಲೇಶ ಕಪಟ- ನಾಟಕ ಶ್ರೀ ಲಕುಮೀಶ-ಆಹ ನೇಟಾಗಿ ನಖ ಲಲಾಟ ಪರಿಯಂತ ನೋಟದಿಂದಲೆ ಈಶ ಕೋಟಿ ಸಹಿತನಾಗಿ ||22|| ಕಾಮಾದಿಗಳನೆಲ್ಲ ತರಿದು ಮುಕು- ತೀ ಮಾರ್ಗವನ್ನೆ ನೀನರಿದು ಅತಿ- ಪ್ರೇಮದಿ ಗುರುಗಳ ನೆನೆದು ಹೇಮ ಭೂಮಿ ಕಾಮಿನಿಯರ ಜರಿದು-ಆಹ ಸಾಮಜ ವರದ ಶ್ರೀ ವಿಜಯವಿಠ್ಠಲನಂಘ್ರಿ ತಾಮರಸ ಯುಗ್ಮ ನೇಮದಿಂದಲಿ ನಿತ್ಯ ||23||

Thoughts & Reflections

0

No reflections shared yet. Be the first to share your thoughts!

Share your thought