Bhasaka
← Back to home

ನಿನಗೆ ಅಂಜುವನಲ್ಲ ನೀರಜಾಕ್ಷ

Author: ವಿಜಯದಾಸCategory: ಶ್ರೀಕೃಷ್ಣ
ನಿನಗೆ ಅಂಜುವನಲ್ಲ ನೀರಜಾಕ್ಷ ಮನವಚನ ಕಾಯದಿಂ ನಿನ್ನವರಿಗಂಜುವೆನು ರಾಗದಿಂದಲಿ ಇಂದ್ರದ್ಯುಮ್ನ ಭೂಪಾಲಕನು ಯೋಗ ಮಾರ್ಗದಿ ನಿನ್ನ ಭಜಿಸುತಿರಲು ಯೋಗ ಕುಂಭೋದ್ಭವನು ಬಂದು ಶಾಪವೆ ಕೊಡಲು ಆಗ ಮೌನದಲವನನೊಪ್ಪಿಸಿದ ಬಗೆ ಬಲ್ಲೆ ||1|| ಗುಣವಂತರೀರ್ವರು ಜಯವಿಜಯರು ನಿನ್ನ ಅನುಗಾಲ ಬಾಗಿಲನು ಕಾಯುತಿರಲು ಸನಕಾದಿಗಳು ಬಂದು ಶಪಿಸಲಾಕ್ಷಣದಲ್ಲಿ ಸನುಮತದಲವರ ನೀನೊಪ್ಪಿಸಿದ ಬಗೆಬಲ್ಲೆ ||2|| ನೃಗರಾಯ ಪುಣ್ಯ ಬರಬೇಕೆನುತ ವಿಪ್ರರಿಗೆ ನಿಗಮೋಕ್ತಿಯಿಂದ ಗೋದಾನ ಕೊಡಲು ಜಗಳ ಪುಟ್ಟಿತು ನೋಡು ಅನ್ಯೋನ್ಯರೊಡಗೂಡಿ ಮಿಗೆ ಶಾಪ ಕೊಡಲವನನೊಪ್ಪಿಸಿದ ಬಗೆ ಬಲ್ಲೆ ||3|| ಉಣಲಿತ್ತರೆ ಉಂಡು ಪೋಗಲೊಲ್ಲದೆ ಒಂದು ತೃಣದಲ್ಲಿ ಗೋವನ್ನೆ ರಚಿಸಿ ನಿಲಿಸಿ ಮುನಿಪ ಗೌತಮನಿಗೆ ಗೋಹತ್ಯವನು ಹೊರಿಸಿ ಕ್ಷಣದೊಳಗೆ ಅವನ ನೀನೊಪ್ಪಿಸಿದ ಬಗೆ ಬಲ್ಲೆ ||4|| ಅನಪರಾಧಿಗಳಿಗೆ ಇನಿತಾಯಿತೋ ದೇವ ಎನಗೆ ತನಗೆಂಬುವರಿಗಾವ ಗತಿಯೊ ಮಣಿದು ಬೇಡಿಕೊಂಬೆ ವಿಜಯವಿಠ್ಠಲರೇಯ ನಿನಗಿಂತ ಭಕುತಿ ನಿನ್ನವರಲ್ಲಿ ಕೊಡು ಎನಗೆ ||5||

Thoughts & Reflections

0

No reflections shared yet. Be the first to share your thoughts!

Share your thought