Bhasaka
← Back to home

ನಿನ್ನ ನೋಡಲಿ ಬಂದೆ ನಿತ್ಯ ತೃಪ್ತಾ

Author: ವಿಜಯದಾಸCategory: ಶ್ರೀಕೃಷ್ಣ
ನಿನ್ನ ನೋಡಲಿ ಬಂದೆ ನಿತ್ಯ ತೃಪ್ತಾ ಅನ್ಯರಿಂದಲಿ ಎನಗೆ ಏನು ಪ್ರಯೋಜನವೊ ದರುಶನಕೆ ಬಂದವ ನಾನಲ್ಲವೆಂದು ನಾನಂದು ಹರಿ ನಿನಗೆ ನುಡಿದದ್ದು ಮನಸ್ಸಿನೊಳಗೆ ಇರುತಿಪ್ಪದೇನಯ್ಯಾ ಬಿನ್ನಪವೆ ಲಾಲಿಸು ಶರಣ ಜನರ ಅಭಿಪ್ರಾಯವೊಂದು ಬಗೆ ಇಪ್ಪದೊ||1|| ನಿರುತ ವ್ಯಾಪ್ತತ್ವ ಕರುಣತ್ವ ಅಣುಮಹತ್ತು ಸರುವ ಚೇತನ ಜಡ ಮತ್ತೆ ಮತ್ತೆ ಪರಿ ಪರಿಯಿಂದಲಿ ನಿನ್ನಲಿ ಉಂಟು ನಿನ್ನ ವರ ಮೂರ್ತಿಗಳ ಪೇಳದೆ ಇದಷ್ಟು ವಿನಯದಲಿ ||2|| ಧ್ಯಾನಕ್ಕೆ ನೀನು ಪ್ರಧಾನನೆಂದು ನುಡಿದೆ ಆನಂದಮತಿ ಕೊಡುವ ಅಪ್ರಮೇಯ ಕ್ಷೋಣಿಜನಕಿಂತ ದ್ವಾರದವರು ವೆಗ್ಗಳವಾಗೆ ಏನೆಂಬೆ ತಿರುವೇಂಗಳೇಶ ನಿನ್ನಾಟಕ್ಕೆ ||3|| ಮಿಕ್ಕ ಮಂದಜನಕೆ ನಿನ್ನ ಭಕುತರ ಮೇಲೆ ಭಕುತಿ ಪುಟ್ಟುವುದಕ್ಕೆ ನಾ ಪೇಳಿದದ್ದು ಅಕಟಕಟ ನಿನ್ನ ದೊರೆತನಕೆ ಏನೆಂಬೆ ತಕ್ಕ ಮಾತುಗಳೇನೊ ಆಲೋಚಿಸಿ ನೋಡೆ ||4|| ಹೊನ್ನು ಹಣ ತೂಗಬೇಕಾದರೆ ಮೊದಲಿಗೆ ಚಿನ್ನ ಹಾಕುವರೇನೊ ಚಿನ್ಮಯರೂಪ ಮುನ್ನೆ ನಿನ್ನವರ ದರುಶನವಾದ ಮೇಲೆ ಪಾ ವನ್ನ ಶಾರೀರನೆ ನಿನ್ನ ಕಾಂಬುವದುಚಿತ ||5|| ಜರೆಮರಣರಹಿತ ಸುಜನರ ಪರಿಪಾಲಾ ನಿ ರ್ಜರಗಣಕೆ ನಿತ್ಯ ವಜ್ರಪಂಜರಾ ಜರಗೆ ವರವಿತ್ತ ದನುಜರ ವಂಶನಾಶಾ ನಿ ರ್ಜರ ನದಿ ಜನಕಾಂಬುಜ ರವಿ ನಯನ ದೇವಾ ||6|| ಸ್ಥೂಲಮತಿಯಿಂದ ಪೇಳಿದೆನೆಂದು ಚನ್ನಾಗಿ ಲಾಲಿಸು ಲಲಿತಾಂಗಿ ಲಕುಮಿ ರಮಣಾ ನೀಲಗಿರಿ ನಿವಾಸ ವಿಜಯವಿಠ್ಠಲ ವೆಂಕಟವಾಲಗವ ಕೈಗೊಳ್ಳು ಎನ್ನ ಯೋಗ್ಗಿತವರಿತು||7||

Thoughts & Reflections

0

No reflections shared yet. Be the first to share your thoughts!

Share your thought