Bhasaka
← Back to home

ನಿನ್ನನಗಲಿ ಪೋಗಲಾರೆವೋ

Author: ವಿಜಯದಾಸCategory: ಶ್ರೀಕೃಷ್ಣ
ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ ನಿನ್ನ ಸೇರಿ ಸುಖಿಸ ಬಂದೆವೊ ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ ಐದುವದಕೆ ಶಕ್ಯವಲ್ಲದ ಅಪ್ರಮೇಯ ಆದಿಪುರುಷ ಅಮರಸನ್ನುತ ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ- ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ||1|| ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ ನಿಂದ್ಯವೆಂದು ಶಾಸ್ತ್ರ ಪೇಳ್ವುದು ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ ಸಿಂಧುಶಯನ ಎಮ್ಮನ್ಯಾಕೆ ಇಂದು ಹೋಗಿರೆಂಬೆ ನೀನು||2|| ಶಮದಮಾದಿ ಗುಣಗಳಿಂದಲಿ ಸಜ್ಜನರು ಕ್ರಮದಿ ನಿನ್ನ ಮೂರ್ತಿ ಮನದಲಿ ಮಮತೆಯಿಂದ ಪೂಜಿಸುತ್ತ ಗಮಿಸುವರೊ ನಿನ್ನ ಪುರಕೆ ನಮಗೆ ಮಾತ್ರ ಪತಿಸುತಾದ್ಯರಮಿತ ಸುಖವ ಕೊಡುವರೇನೊ ||3|| ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ ಪಕ್ಷ ವಹಿಸಿದಂತೆ ನಮ್ಮನು ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ ಲಕ್ಷ್ಮೀದೇವಿ ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ ||4|| ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ ತನುವು ಮನವು ನಿನಗೆ ಅರ್ಪಿಸಿ ಜನನ ಮರಣದಿಂದ ಜನರು ದಣಿವರೇನೂ ಕಾಂತ ನಮ್ಮ ಮನಸಿನಂತೆ ಒಲಿದು ಸಲಹೊ ವನಜನಾಭ ವಿಜಯವಿಠ್ಠಲ ||5||

Thoughts & Reflections

0

No reflections shared yet. Be the first to share your thoughts!

Share your thought