Bhasaka
← Back to home

ನೋಡಿದ್ಯ ರಂಗೈಯನ ನೋಡಿದ್ಯ

Author: ವಿಜಯದಾಸCategory: ಶ್ರೀಕೃಷ್ಣ
ನೋಡಿದ್ಯ ರಂಗೈಯನ ನೋಡಿದ್ಯ ನೋಡಿದ್ಯ ಮನವೆ ನೀನಿಂದು ಕೊಂ- ಡಾಡಿದ್ಯ ಎದುರಲ್ಲಿ ನಿಂದು ಆಹ ಮಾ- ತಾಡಿದ್ಯ ವರಗಳ ಬೇಡಿದ್ಯ ನಿನ್ನೊಳು ಕೂಡಿ ನಲಿನಲಿದಾಡುವ ಶ್ರೀ ರೂಪ ಚರಣತಳದಲ್ಲಿ ಕೆಂಪು- ಶುದ್ದ ಅರವಿಂದ ಧ್ವಜ ವಜ್ರಸೊಂಪು- ಸ್ತುತಿ ಪರಿಗೆ ಸುರಂಘ್ರಿಪ ತಂಪು- ನೋಡ- ಲರಸಿ ಕಾಣದೊ ವೇದಗುಂಪು, ಆಹ ಹರಡಿ ಹಿಂಬಳೆ ಸಾಲ್ಬೆರಳೈದರ ಮೇಲೆ ಸುರುಚಿರ ರೇಖೆ ಚಂದ್ರಮನ ಸೋಲಿಪ ನಖ||1|| ಸರಸ ನೂಪುರ ಗೆಜ್ಜೆ ಪೆಂಡ್ಯ - ಹೊನ್ನ ಸರಪಳಿ ಪಾಡಗ ಕಂಡ್ಯ - ಹಿಂದೆ ಧರೆಗೆ ಮುಟ್ಟಿದ ಜಡೆಗೊಂಡ್ಯ - ಇದು ತರುಣಿ ಎನ್ನದಿರು ಕಂಡ್ಯ - ಆಹ ಬೆರಳಲ್ಲಿ ಇಟ್ಟ ಸುಂದರ ಪಿಲ್ಲಿಮೆಂಟಿಕೆ ಕಿರಿಪಿಲ್ಲಿ ಅಡಿಮೆಟ್ಟು ಮೆರೆವ ಕಾಲುಂಗರ||2|| ಝಣ ಝಣ ಗೆಜ್ಜೆನಾದ - ವನ್ನು ಎಣಿಸಲಾರದು ನೋಡಿ ವೇದಾ - ನಂತ - ಗುಣಗಳುಭೈರಿಸುವ ಮೋದ - ಇದು ಅಣುರೇಣು ತೃಣಕಾಷ್ಠ ಭೇದ, ಆಹ ಪ್ರಣತಾರ್ತಿ ಹರವಾದ ಮಿನುಗುವ ಜಾನುದ - ರ್ಪಣ ನಾಚಿಪ ಜಂಘೆ ಎಣೆಗಾಣೆ ಸ್ತ್ರೀರೂಪ ||3|| ಊರುದ್ವಯಂಗಳು ರಂಭಾ - ಸ್ತಂಭ ಚಾರು ಪೊಕ್ಕುಳ ಸುಳಿಗುಂಭ - ತಂತ್ರಾ - ಸಾರೋಕ್ತದಿ ಪೂಜೆಗೊಂಬ - ವಿ ಸ್ತಾರ ಮಹಿಮೆ ಗುಣತುಂಬ, ಆಹ ನಾರಿ ಲಾವಣ್ಯದ ಪಾರ ಮೀರಿದ ಕಾಂತಿ ಆರಾರ ಮನಸಿಗೆ ತೋರದ ಪೆಣ್ಣಿನ||4|| ಉದಯರಾಗದ ದಿವ್ಯವಸನ - ಮೇಲೆ ಉದರ ತ್ರಿವಳಿ ಬಂದಿ ಹಸನ - ಕೇಳು ಮುದದಿಂದ ವಡ್ಯಾಣ ಬೆಸನ - ನೋಡು ಯದುಕುಲ ಜಾತ ಮಾನಿಸನ, ಆಹ ಮದಕರಿಯಂದದಿ ವಲಿದೊಲಿದಾಡಲು ಮದನಾರಿ ಮರುಳಾದ ಅದುಭುತ ಚರಿಯನ್ನ ||5|| ದೋರ್ಯ ಹರಡಿ ಕೈಕಟ್ಟು - ಚೂಡ್ಯ ಈರೈದುಂಗುರವುಳ್ಳ ಬೆಟ್ಟು - ಬಂ - ಗಾರ ಕಂಕಣ ಬಳೆಯಿಟ್ಟು - ಶೃಂ ಗಾರ ಹಣೆಗೆ ಹಚ್ಚಿ ಬೊಟ್ಟು, ಆಹ ಗೀರು ಗಂಧವು ಗಂಬೂರ ಕರ್ಪೂರ ಕ- ಸ್ತೂರಿ ಲೇಪನ ಶೃಂಗಾರ ತ್ರಿವಳಿಯ ||6|| ತಾಯಿತು ಮುತ್ತ ಕಟ್ಟಾಣಿ - ತೋಳ ತಾಯಿತ ಬಂಧುರ ಮಣಿ - ವಂಕಿ ಕೇಯೂರ ಪಲ್ಲವ ಪಾಣಿ - ಉ ಪಾಯದಲ್ಲಿ ಘಟ್ಟಿ ಕಾಣಿ, ಆಹ ನೋಯದೆ ಸುರರಿಗೆ ಪೀಯೂಷ ವುಣಿಸಿ ದೈ- ತೇಯರ ಮಡುಹಿದ ಮಾಯದ ಕನ್ನಿಕೆ ||7|| ಸರಿಗೆ ಮುತ್ತಿನ ಚಿಂತಾಕ - ಕುಚ- ವೆರಡರ ಮೇಲೆ ಕಂಚುಕ - ತೊಟ್ಟ ಭರದಿ ತೂಗುವ ಪಚ್ಚೆಪದಕ - ಕೆಳಗೆ ಹರಿ ನಡುಕಿಂಕಿಣಿ ಕನಕ, ಆಹ ಹರಳು ಕೆತ್ತಿದ ಚಿತ್ತರ ಮಾಟ ಕಟಿಸೂತ್ರ ಧರೆಗೆ ಶೋಭಿಪ ಸೀರೆ ನೆರೆಯ ವೈಭವವನು ||8|| ರನ್ನ ಪವಳ ಸರ ಥಳಕು - ಜೋಡು ಕನ್ನಡಿ ಹಾಕಿದ ಮಲಕು - ನೋಡು ಅನ್ನಂತ ಸೂರ್ಯರ ಝಳಕು - ಲೋಕ ಚನ್ನಾಗಿ ತುಂಬಿದ ಬೆಳಕು ರನ್ನ ತ್ರಿವಳಿ ಹೇಮ ಸಣ್ಣ ಮುತ್ತಿನ ಮೋ ಹನ್ನ ಏಕಾವಳಿ ಚಿನ್ನದ ಸರಗಳು ||9|| ಸಿರಿವತ್ಸ ಕೌಸ್ತಭ ಹಾರ-ವೊಪ್ಪೆ ಉರ ವೈಜಯಂತಿ ಮಂದಾರ - ಮೇಲೆ ತರುಣ ತುಲಸಿ ಜನಿವಾರ - ಇಟ್ಟು ವರಭುಜಕೀರ್ತಿ ಕುಂಜರ, ಆಹ ಕರದಂತೆರಡು ತೋಳು ಎರಡೊಂದಾರು ಸಾ- ವಿರ ರೂಪನಾಗಿ ಶರೀರದೊಳಿಪ್ಪನ ||10|| ಸಕ್ಕರೆ ತುಟಿ ಕೂರ್ಮ ಕದಪು - ಕಣ್ಣಿ- ಗಿಕ್ಕಿದ ಸೊಬಗಿನ ಕಪ್ಪು - ತಲೆ - ಹಿಕ್ಕಿ ಬಾಚಿದ ಕೇಶ ಥಳಪು - ಸರ್ವ ದಿಕ್ಕು ಮೋಹಿಸುವಂಥ ವಲಪು, ಆಹ ಲಕ್ಕುಮಿ ದೇವಿಯ ಲೆಕ್ಕಿಸದೇ ಮಗನ ಪೊಕ್ಕುಳಿಂದಲಿ ವೆತ್ತ ಅಕ್ಕಜದಬಲೆಯ||11|| ಸೂಸುವ ದಾಡಿಯ ದಂತ - - ನಾಸ ಮೂಗುತಿಯಿಟ್ಟ ಶಾಂತ - ಸುಖ ಲೇಸು ಹಾಸ ಜಗದಂತ - ರಂಗ ಭಾಸ ಮಿಗಿಲು ಚಂದ್ರಕಾಂತ, ಆಹ ಸುಷುಪ್ತಿಯಲ್ಲಿ ಭೂಶ್ವಾಸ ಬಿಡುವರನ್ನು ಲೇಸಾಗಿ ಸಲಹುವ ದೋಷನಾಶನ ರೂಪ||12|| ಎಸೆವ ಪಂಜರದೋಲೆ ಕಿವಿಯ-ಹೊನ್ನ ಕುಸುಮ ಕೂಡಿದ ಬಾವಲಿಯ - ತಿದ್ದಿ ಕುಸುರಿಯಿಕ್ಕಿದ ಸರಪಣಿಯ - ಚಿನ್ನ ಸೋಸಲು ಕುಂಕುಮ ರ್ಯಾಕಟೆಯ, ಆಹ ಎಸಳು ಕೇದಿಗೆ ಬಹು ಕುಸುಮವ ಮುಡಿದದ್ದು ವಶವಲ್ಲ ಚೌರಿ ಅರಸಿನ ಪೂಸಿದ ಹೆಣ್ಣ||13|| ಭ್ರೂಲತೆ ವಲಯ ಕಪೋಲ - ಪೊಸ- ಮೌಳಿ ಕೈಯಲ್ಲಿ ಕಡೆಗೋಲ - ನೇಣು ಪಾಲಯ ಪಿಡಿದ ಸುಶೀಲ - ಧರೆಯ - ನಾಳಿದ ಭಕ್ತವತ್ಸಲ, ಆಹ ಶೂಲಿಯ ನೆಲೆಸಿದ ಖೂಳನ ಸದೆದು ಹಿ- ಯ್ಯಾಳಿಸಿ ಮೆರೆದ ಗೋಪಾಲನೆಂಬ ಹೆಣ್ಣ||14|| ರಜತ ಪೀಠ ಪುರಾಧೀಶ - ನಂದ ವ್ರಜದೊಳಾಡಿದ ಸರ್ವೇಶ - ನಮ್ಮ ವಿಜಯವಿಠ್ಠಲ ನಾರಿವೇಷ - ತನ್ನ ನಿಜಭಕ್ತ ಮಧ್ವಮುನೀಶ, ಆಹ ಭಜನೆ ಮಾಡಲು ಮೆಚ್ಚಿ ತ್ರಿಜಗ ಮಧ್ಯದಲಿ ನಿಜ ಪದವಿಯನಿತ್ತು ಸುಜನರಿಗೊಲಿದನ್ನ||15||

Thoughts & Reflections

0

No reflections shared yet. Be the first to share your thoughts!

Share your thought