Bhasaka
← Back to home

ಮಾನಸ ಪೂಜೆಯನು ಮಾಡು

Author: ವಿಜಯದಾಸCategory: ಶ್ರೀಕೃಷ್ಣ
ಮಾನಸ ಪೂಜೆಯನು ಮಾಡು | ಧ್ಯಾನ ಪೂರ್ವದಿಂದ ಕುಳಿತು ಜ್ಞಾನ ಭಕುತಿಯ ವಿಡಿದು ಲಕುಮಿ | ಪ್ರಾಣನಾಥನ ಪ್ರೇರಣೆಯಿಂದ ಕಾಮ ಕ್ರೋಧವ ಹಳಿದು ವಿಷಾದವೆಂಬೋ | ಸ್ತೋಮಗಳನು ತೊರೆದು ರಜೋ ಮೊದಲಾದ || ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು | ಶ್ರೀಮದಾನಂದತೀರ್ಥರ ಕೋಮಲಾಂಘ್ರಿಯಲ್ಲಿ ಈ ಮನಸ್ಸು ಇಟ್ಟು ||1|| ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು | ದೇಹ ಕದಲದಂತೆ ಇದ್ದುಜ್ಞಾನ ಉದಿತವಾದ ದೃಷ್ಟಿಯ || ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ | ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ||2|| ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ | ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ || ಲಾಲಿಯಿಂದ ತುತಿಸಿ ತವಕ ಬೀಳದಲೆ ಪೂಜೆ ವಿಧಾ | ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ ||3|| ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- | ಯಾದ ತರುವಾಯ ವಿನೋದದಿಂದಲಾವರಣ || ಆದರಣೆಯಿಂದ ಬಳಿಕ ಮಾಧವರಿಗೆ ಸಕಲ ಭೂಷ- | ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ ||4|| ದೋಷರಾಶಿಗೆ ದ್ವೇಷನಾಗಿ ಈ ಶರೀರವ ಘಾಸಿಮಾಡದೆ | ನಾಶರಹಿತನಾದ ಹರಿಯ ಆಶಿರಸಾವಿಡಿದು ಪಾದ || ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ | ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು||5||

Thoughts & Reflections

0

No reflections shared yet. Be the first to share your thoughts!

Share your thought