Bhasaka
← Back to home

ನೋಡಿರಣ್ಣ ನೀವೆಲ್ಲ ಬಂದು

Author: ಹೆಚ್ ಎನ್ ಮುರಳೀಧರCategory: ಶ್ರೀರಾಮಕೃಷ್ಣRaaga: ಮಿಶ್ರ ಪಹಾಡೀTaala: ಕವಾಲೀ
ನೋಡಿರಣ್ಣ ನೀವೆಲ್ಲ ಬಂದು ಈ ನೂತನ ಮಾನವನ | ತ್ಯಾಗ - ವಿವೇಕದ ಚೀಲಗಳೆರಡನು ಹೆಗಲಲಿ ಹೊತ್ತಿಹನ || ಗಂಗೆಯ ದಡದಲಿ ಹೊರಳುತ 'ತಾಯಿ' ಎನ್ನುತ ಕೂಗುವನು | 'ಕಾಣದೆ ನಿನ್ನನು ದಿನಗಳುರುಳುತಿವೆ' ಎನ್ನುತ ಮರುಗುವನು || ನಂಬದ ನೆಚ್ಚದ ಮಂದಮತಿಗಳಿಗೆ ಸರಳಕಥೆಯ ಹೇಳಿ | ಕಾಳಿಯು ಕೃಷ್ಣನು ಒಂದೇ ಎನ್ನುತ ಸಾರುತಿಹನು ಕೇಳಿ || ಅಕ್ವಾ-ವಾಟರ್-ಪಾನಿ-ವಾರಿಗಳು ನೀರಿಗೊಂದೆ ಹೆಸರು | ಅಲ್ಲಾ-ಜೀಸಸ್-ಮೋಸೆಸ್-ಕಾಳಿಯರು ಪರಬ್ರಹ್ಮನುಸಿರು || ಪಂಡಿತ - ಪಾಮರ - ಬಡವನು - ಬಲ್ಲಿದ ಭೇದ ತೋರಲಿಲ್ಲ| ಜಾತಿಮತಗಳಾ ರೀತಿನೀತಿಗಳ ಮನಕೆ ತಾರಲಿಲ್ಲ || ದಿವ್ಯೋನ್ಮಾದದಿ ಬಾಹುಗಳೆರಡನು ಬೀಸಿ ಕರೆಯುತಿಹನು | ತಾಮಸಗೈಯದೆ ಎಲ್ಲರು ಬೇಗನೆ ಬನ್ನಿರೆನ್ನುತಿಹನು || ಜಗದ ಜನಗಳಿಗೆ ಕೃಪೆಯನು ತೋರಲು ಕಾತರಗೊಂಡಿಹನು | ಭವಸಾಗರವನು ದಾಟಿಸೆ ನೌಕೆಯ ತಂದು ಕಾಯುತಿಹನು ||

Thoughts & Reflections

0

No reflections shared yet. Be the first to share your thoughts!

Share your thought