Bhasaka
← Back to home

ರಾಜಕುಲ ವನರಾಶಿ ರಾಜರಾಜೇಶ್ವರಾ

Author: ವಿಜಯದಾಸCategory: ಶ್ರೀಕೃಷ್ಣ
ರಾಜಕುಲ ವನರಾಶಿ ರಾಜರಾಜೇಶ್ವರಾ | ರಾಜೀವ ನಯನ ಯದುರಾಜ ಎಲೊ ಭಾಪುರೆ ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ | ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ | ದುರಳ ಶಕಟಾಸುರನ ಚರಣ ದುಂಗುಟದಲ್ಲಿ ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ ||1|| ಸುರಪ ಗರ್ವಿಸೆ ಸಪ್ತದಿನ ಮಳೆಗರಿಯೆ ವ್ರಜ | ಪುರವ ಪಾಲಿಸಿದೆ ಕಾಳಿಂಗನೈದು | ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ | ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ ||2|| ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ | ಕರುಣದಿಂದಲಿ ನಿಜರೂಪ ತೋರಿ | ಭರದಿಂದ ಕರಿರಾಜ ಕರಿಯೆ ಬಿಲ್ಲು ಮಲ್ಲರ ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ ||3|| ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು | ಅನಿಲ ಸುತನಿಂದ ಮಾಗಧನ ಕೊಲ್ಲಿಸಿ | ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ | ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ ||4|| ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ | ತರಣಿಸುತ ದುಶ್ಶಾಸ ಕೌರವೇಶಾ | ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ | ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ||5|| ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ | ತೋರಿದೆ ಒಬ್ಬೊಬ್ಬ ನಾರಿಯಲಿ | ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ | ವರ ಸಂತಾನವನು ಪಡದೆ ಎಲೊ ಭಾಪುರೆ ||6|| ವರ ಚಂದ್ರಹಾಸ ಮಿಗಿಲಾದ ಭೂಪಾಲಕರ | ಕರೆಸಿ ಪಾಂಡುವರ ಯಾಗವನೆ ಮುಗಿಸಿ | ಹರುಷದಲಿ ಯದುಕುಲವಾಸ ಮಾಡಿದೆ | ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ ||7||

Thoughts & Reflections

0

No reflections shared yet. Be the first to share your thoughts!

Share your thought