Bhasaka
← Back to home

ರಾಮ ಜಾನಕೀರಮಣ ರಾಜೀವದಳನಯನ

Author: ವಿಜಯದಾಸCategory: ಶ್ರೀರಾಮ
ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. ||1|| ವಾಣಿ ಭಾರತಿ ಖಗಪರಾಣಿ ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ ||2|| ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಹೆಣ್ಣುಗಳ ಮಧ್ಯೆ ಇಳಿಸಿದರು||3|| ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ- ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ ತಂದು ಅರಿಶಿಣ ಎಣ್ಣೆ ಗಂಧವಿತ್ತು||4|| ತಡಮಾಡಲಾಗದು ಕಡಲಶಯನ ನಿಮ್ಮ ಮಡದಿಯಂಗಕ್ಕೆ ತೊಡೆವುದೆನಲು ಮಡದಿಯಂಗಕ್ಕೆ ತೊಡೆವುದು ಎನಲಾಗಿ ಕಡು ಹರುಷದಿ ಸತಿಯಳ ನೋಡಿದನು ||5|| ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ | ಕನ್ಯೆ ಶಿರೋಮಣಿ ಪಾವನ ದೇಹಿ || ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ | ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ ||6|| ತಂದೆ ನಂದನರಿಗೆ ಬಂಧು ಬಳಗ ಸುತ್ತ | ಹೊಂದಿದ ಜನರಿಗೆ ಹಲವರಿಗೆ || ಹೊಂದಿದ ಜನರಿಗೆ ಹಲವರಿಗೆ ಕದನ | ತಂದು ಹಾಕುವಳೆಂದು ಹಚ್ಚಿದನು ||7|| ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ | ಬಾಗಿಲ ಕಾಯಿಸುವಳೆ ಬಲ್ಲಿದರ || ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ | ಸಾಗರನ ಮಗಳು ಎಂದು ತೊಡೆದನು ||8|| ಇಂದಿರಾದೇವಿ ಬಾ ಮಂದಿರಾಂಬುಜ ರಾಮ | ಸುಂದರ ಶ್ರೀವಾರಿ ಮಂಗಳಗಾತ್ರೆ || ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು | ಅಂಗಜ ಜನಕನು ನಗುತಲಿದ್ದ ||9|| ರಮಣಿಯ ದೇಹಕ್ಕೆ ಕಮಲನಾಭನು ಎದ್ದು | ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ || ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ | ಕ್ರಮದಿಂದ ಲೇಪಿಸಿ ಊಟಣಿಸಾರಿ ||10|| ಸಾಕಾರಗುಣವಂತಿ ತ್ರಿಲೋಕದ ಜನನಿ | ನಾಕಜವಂದಿತಳೆ ನಾಗಗಮನೆ || ನಾಕಜವಂದಿತಳೆ ನಾಗಗಮನೆ ಏಳೂ | ಶ್ರೀಕಾಂತನ ಸೇವೆಯ ಮಾಡೆಂದರು ||11|| ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು | ನಿಂದು ಸಮ್ಮುಖದಲ್ಲಿ ರಂಗನ ನೋಡಿ | ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ | ಚಂದ್ರವದನೆ ಪತಿಗೆ ಹಚ್ಚಿದಳು ||12|| ಗೋವಳರ ಎಂಜಲು ಆವಾಗ ತಿಂದವನೆ | ಮಾವನ್ನ ಕೊಂದವನೆ ಮಾಯಾಕಾರ || ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ | ಸೇವೆಗೆ ಶಕ್ತಳೆನುತ ಹಚ್ಚಿದಳು ||13|| ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ | ಮುನ್ನೆ ತೊತ್ತಿನ ಮಗನ ಮನಿಯ ಉಂಡ || ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ | ಹೆಣ್ಣಾಗಿ ಇದ್ದವನೆಂದು ಹಚ್ಚಿದಳು ||14|| ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ | ಭಿನ್ನವಖಿಳ ಜೀವಕ್ಕೆನ್ನ ಒಡೆಯ || ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು | ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು ||15|| ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ | ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ || ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು | ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು ||16|| ದೇವಿ ದೇವೇಶಗೆ ಈ ಉರುಟಣೆಯಿಲ್ಲ | ಆವಾವ ಬಗೆ ಎಲ್ಲ ತೋರಿಸುತ್ತ || ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ | ಹೂವು ಬಾಸಿಂಗವ ರಚಿಸಿದರು||17|| ಅಸುರ ವಿರೋಧಿ ವಸುದೇವನಂದನ | ಪಶುಪತಿ ರಕ್ಷಕ ಪರಮ ಪುರುಷ || ಪಶುಪತಿ ರಕ್ಷಕ ಪರಮ ಪುರುಷ ಎಂದು | ಹಸನಾಗಿ ಲೇಪಿಸಿ ಇತ್ತ ಜನರ ||18|| ಶೃಂಗಾರವಂತೇರು ರಂಗ ಶ್ರೀಲಕುಮಿಗೆ | ಮಂಗಳಾರತಿ ಎತ್ತಿ ಹರಸಿದರು || ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ | ಅಂಗನೆಯಳ ಸಹಿತ ನಡೆಯೆಂದರಾಗ ||19|| ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ | ಮತ್ತೆ ಸುಗಂಧಿಯರು ಹೊಸ್ತಿಲೊಳಗೆ || ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು | ಪತ್ನಿಯ ಹೆಸರು ಪೇಳೆಂದರು ಆಗ ||20|| ಬೇಗ ಮಾರ್ಗವ ಸಾರಿ ತೂಗಲಾರನು ಇವಳ | ಸಾಗಿ ಪೋಗುವನೆಂದು ಪೇಳುತಿರಲು || ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ | ತೂಗವದೆಂತು ನಾಳೆ ನುಡಿಯೆಂದರು ||21|| ನಕ್ಕು ಸಂತೋಷದಲಿ ರುಕ್ಮಿಣಿ ಎಂದನು | ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ || ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು | ಚಕ್ರಪಾಣಿ ಎಂದು ಪೇಳಿದಳು ಲಕುಮಿ ||22|| ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ | ಮಂಡಲದ ಚರಿತೆ ತೋರಿದರು ಆಗ || ಮಂಡಲದ ಚರಿತೆ ತೋರಿ ವಧು-ವರಗಳಿಗೆ | ಕಂಡವರಿಗೆ ಮದುವೆಯೆನಿಸಿದರು ||23|| ದಂಪತಿಗಳು ಒಲಿದು ಇಂಪಾಗಿ ಉರುಟಣಿ | ಸೊಂಪಾಗಿ ಮಾಡಿದರು ಅನೇಕವಾಗಿ || ಸೊಂಪಾಗಿ ಮಾಡಿದವರ ಕತೆಗಳ ಕೇಳಲು ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ ||24||

Thoughts & Reflections

0

No reflections shared yet. Be the first to share your thoughts!

Share your thought