Bhasaka
← Back to home

ವ್ಯಾಪಾರ ಉದ್ಯೋಗವನು ಮಾಡುವೆ

Author: ವಿಜಯದಾಸCategory: ಶ್ರೀಕೃಷ್ಣ
ವ್ಯಾಪಾರ ಉದ್ಯೋಗವನು ಮಾಡುವೆ | ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ | ಅರವಿಂದನಾಭವೆಂಬೊ ಅಂಗಿಯ ತೊಟ್ಟು || ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ | ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ ||1|| ಕಮಲನಾಭವೆಂಬೊ ಕಮಲದಾನಿ ಪಿಡಿದು | ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ || ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ ||2|| ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು | ಭಾಗವತರು ಕರೆದು ಇಂಬನಿತ್ತು || ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ | ಈಗಳೆ ಕುಳಿತ ಅಚ್ಯುತನ ತೋರಿದರು ||3|| ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ | ಮಂಡಲಾಧಿಪನು ಕರೆದು ಮನ್ನಿಸಿ || ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ | ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು ||4|| ಘನವಾದ ಉದ್ಯೋಗ ದೊರಕಿತು ನನಗಿನ್ನು | ಅನುಮಾನವಿಲ್ಲವು ಎಂದೆಂದಿಗೂ || ದಿನದಿನಕೆ ಹರಿನಾಮವೆಂಬೊ ಲೆಖ್ಖ-| ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ ||5|| ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ | ಹರುಷದಿಂದಲಿ ಎನಗೆ ಸಂಬಳಕ್ಕೆ || ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ | ವರಹಗಳು ಎಂದಿಗಾದರು ಅಳಿವಿಲ್ಲದೆ ||6|| ಈಸು ದಿನ ಉದ್ಯೋಗ ಹೀನನಾಗಿ ನೊಂದೆ | ದಾಸರಾ ದಯದಿಂದ ದೊರೆಕಿತಿಂದು || ಏಸು ಜನ್ಮದ ಸಂಚಿತ ಕರ್ಮ ಓಡಿಸಿ | ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ ||7||

Thoughts & Reflections

0

No reflections shared yet. Be the first to share your thoughts!

Share your thought