Bhasaka
← Back to home

ಶಂಭೋ ಸ್ವಯಂಭು ಸಂಭವ

Author: ವಿಜಯದಾಸCategory: ಶ್ರೀಶಿವ
ಶಂಭೋ ಸ್ವಯಂಭು ಸಂಭವ-ನಂಬಿದೆ ಕಾಯೊ ಜಂಭಾರಿಸುತ ಅಭವ ಅಂಬರ ಪುರಹರ ಸಾಂಬ ತ್ರಿಯಂಬಕ ಶಂಬಕಾರಿ ರಿಪುಗಂಭೀರ ಕರುಣಿ ಭಸಿತ ಭೂಷಿತ ಶರೀರ-ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಹಾರ-ಪಾವನಕಾರ ತ್ರಿಶೂಲ ಡಮರುಗಧರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ನಸದಲಿ ರಂಗನ ಬಿಸಜ ಪಾದವ ತೋರೊ ||1|| ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜವೈದ್ಯನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರ ಮಂದಿ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವಜ್ರಮುನಿ ವಂದಿತ ಭಜಿಸುವೆ ನಿನ್ನ||2|| ಮಧರಾಪುರಿ ನಿಲಯ ಮೃತ್ಯುಂಜಯ ಸದಮಲ ಸುಮನಗೇಯ ಸದಾ ನಮಿಪರ ಹೃದಯದೊಳಗುಳ್ಳ ಭಯ- ಸದೆಯುತ್ತ ಕೊಡು ಅಭಯ ಸದಾಶಿವ ಜಾಹ್ನವಿ ಧರಕೃತ ಮಾರಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ ಮಧುಪನೆನಿಪ ಪಂಚವದನ ಕೈಲಾಸ ||3||

Thoughts & Reflections

0

No reflections shared yet. Be the first to share your thoughts!

Share your thought