Bhasaka
← Back to home

ಆಚಾರವಿಲ್ಲದ ನಾಲಿಗೆ

Author: ಪುರಂದರದಾಸCategory: ಶ್ರೀಕೃಷ್ಣRaaga: ದರಬಾರೀ ಕಾನಡಾTaala: ತೇವರಾ
ಆಚಾರವಿಲ್ಲದ ನಾಲಿಗೆ | ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ | ವಿಚಾರವಿಲ್ಲದೆ ಪರರ ದೂಷಿಪುದಕೆ ಚಾಚಿಕೊಂಡಿರುವಂಥ ನಾಲಿಗೆ || ಪ್ರಾತಃಕಾಲದೊಳೆದ್ದು ನಾಲಿಗೆ | ಸಿರಿ - ಪತಿಯೆನ್ನಬಾರದೆ ನಾಲಿಗೆ | ಪತಿತಪಾವನ ನಮ್ಮ ರತಿಪತಿಜನಕನ ಸತತವು ನುಡಿ ಕಂಡ್ಯ ನಾಲಿಗೆ || ಚಾಡಿ ಹೇಳಲಿಬೇಡ ನಾಲಿಗೆ | ನಿನ್ನ ಬೇಡಿಕೊಂಬೆನು ಕಂಡ್ಯ ನಾಲಿಗೆ | ರೂಢಿಗೊಡೆಯ ಶ್ರೀರಾಮನ ಪಾದವ ಪಾಡುತಲಿರು ಕಂಡ್ಯ ನಾಲಿಗೆ || ಹರಿಯನ್ನೆ ಸ್ಮರಿಸಯ್ಯ ನಾಲಿಗೆ | ನರ - ಹರಿಯನ್ನೆ ಭಜಿಸಯ್ಯ ನಾಲಿಗೆ | ವರದ ಪುರಂದರವಿಟ್ಠಲರಾಯನ ಚರಣವ ಸ್ತುತಿಸಯ್ಯ ನಾಲಿಗೆ ||

Thoughts & Reflections

0

No reflections shared yet. Be the first to share your thoughts!

Share your thought