Bhasaka
← Back to home

ಸರಸೀರುಹಾಕ್ಷ ಕೃಷ್ಣನ

Author: ವಿಜಯದಾಸCategory: ಶ್ರೀಕೃಷ್ಣ
ಪ್ರಥಮ ವಚನ ಸರಸೀರುಹಾಕ್ಷ ಕೃಷ್ಣನ | ಚರಣ ಅರುಣಾರ್ಣವ ಕಾಂತಿಯಿಂದಿರುವ | ಪರಮ ಸುಂದರ ರೇಖೆ ಧ್ವಜ ವಜ್ರಾಂಕುಶ ಶಂಖ | ಚಕ್ರ ಪದುಮ ಗದೆ | ವರಚಿಹ್ನೆಯಿಂದಿರುವ | ಕಿರಿಗೆಜ್ಜೆಗಳ ಛಾಯ ಅದರೊಳಗೆ ಬಿದ್ದಿರುವ ಪರಮಪವಿತ್ರ ತ್ಯುಬುಗಳ ತೆಗೆದು | ನೇತ್ರದೊಳಗೊತ್ತಿ | ಪರಿಮಳವಾದ ಗಂಧಗಳಿಂದ ಅಲಂಕೃತ | ಸಿರಿದೇವಿ ವರದೊಡೆಯ ಮೇಲಿದ್ದು | ಕರಕಮಲದಲೊತ್ತುವ | ಚರಣ ದರುಶನವೆನಗಾಯಿತು ಇಂದಿನ ದಿನವೆ ಪರಮ ಪುಣ್ಯೋದಯ ವಿತ್ರತರ ಗಂಗೆ ಮೊದಲಾದ ನದಿಗಳು ಜನಿಸಿಹ ಪಾದ | ಸರಸೀರುಹ ಸರಸದಿಂ ಕೊಂಡಾಡಿ | ವರಬೇಡಿ ಹಾಡಿ ಅದರೊಳು ಬಿದ್ದು ನೆರಳಿ ಮರಳೀ ಸೌಖ್ಯದಾನಂದ | ಶರಧಿಯೊಳು ಮುಣುಗಿ ಮುಣುಗಿ ಏಳುತ | ಕರವೆರಡು ಜೋಡಿಸಿ ಪರಿಮಿತಿಯಿಲ್ಲದ ಸೌಖ್ಯದಾನಂದ ಭಕ್ತಿಭಾವಗಳಿಂದ ಕರುಣಾಳು ಕೃಷ್ಣ ತ್ವರಿತದಲಿ ತನ್ನ ಸೇವಕ ಜನರೊಳಗೆ | ಸೇರಿಪ್ಪ ನಾ ಅರಿಯನು ನಾನೊಂದು ಸ್ತೋತ್ರ ಮಾಡುವದಕ್ಕೆ | ವರವ್ರಜ ತರುಣಿಯರು ಏನು ಪುಣ್ಯವ ಮಾಡಿದರೊ | ಸರುವದಾ ಹರಿಯನ್ನು ಕಾಣುವರು ಕಂಗಳಲಿ | ಪರಿಹಾಸ್ಯ ನುಡಿಯಲ್ಲ | ಪರಮ ಪವಿತ್ರರಿಗೆ ದೊರೆ | ಸಿರಿ ವಿಜಯವಿಠ್ಠಲನು | ಕರವಿಡಿದು ಎನ್ನಭೀಷ್ಟವನಿತ್ತು | ಪರಿಪಾಲಿಸಬೇಕೆಂದು ಭಕ್ತ ಕೇಳಿದನು ||1|| ದ್ವಿತೀಯ ವಚನ ಜಲಜನಾಭನ ರಥದ ದಡದ ಮೇಲೆ ನಿಲ್ಲಿಸಿ | ಜಲದೊಳಗೆ ತಾ ಮುಳುಗಿ ಅಕ್ರೂರ ಕಣ್ಣು ತೆರೆಯೆ | ಕಲುಷವರ್ಜಿತನಾದ ಕೃಷ್ಣ | ಹಲಧರನ ಸಹ ಮೇಳ ಸಂಭ್ರಮದಿ | ಜಲದೊಳಗೆ ತಾ ಕಂಡು | ಕಲಕಲನೆ ಚಿಂತಿಸಿ ಕರುಣಸಾಗರನಾದ ಕೃಷ್ಣಗೆ | ನಾ ಪೇಳಿದ ಮಾತು ನಡಿಸಿ | ಬಲವಂತದಲಿ ಬಿದ್ದ ಭವರೋಗ ವೈದ್ಯನ ಮಾತೆ | ಲಲನಾಮಣಿಗೆ ಏನು ಹೇಳುವೆನು | ಸುಲಭವಾಗಿ ಎಮಗೆ ಅಭೀಷ್ಟಪ್ರದವಿದು | ಬಾಲಕರು ಸುಲಲಿತಾಂಗೇರು ಸುಂದರರು ಎಂದೆನುತ ತಂದೆ ನಂದಗೋಪನು | ಕೇಳೆ ಮಂದಮತಿ ಏನು ಪೇಳುವೆನು ಎನುತಲಕ್ರೂರ ಯೋಚಿಸಿ ಮನದಲಿ ಚಿಂತೆಯಗೊಂಡು | ಹನುಮೇಶ ವನಜಾಕ್ಷ | ಘನಮಹಿಮ ಎನ್ನ ಮನದ ಚಿಂತೆಯನು ಹನನವ ಮಾಡಿ ಎನ್ನ ಕೈಪಿಡಿಯಲಾಗದೆ ಈಗ ಎನುತ | ಮೇಲೇಳೆ ಸನಕ ಸನಂದನ ಸನತ್ಕುಮಾರ ಸಹ | ವನಜ ಸಂಭವ ಜನಕ ವೈಕುಂಠಪತಿ ಕೃಷ್ಣ | ಕನಕ ರಥದ ಮೇಲೆ ನಿಂತಿದ್ದು ತಾ ಕಂಡು | ಕರವೆರಡು ಜೋಡಿಸಿ | ಭರದಿ ಭಕ್ತಿಯಗೊಂಡು | ನರಜನ್ಮ ಹುಳು ನಿನ್ನ ಮಹಿಮೆಗಳ ಅರಿಯದೆ | ಜಲದೊಳಗೆ ನೀ ಬಿದ್ದಿ ಎನುತಲೀ ಯೋಚಿಸಿದೆ | ಪರಮಗುಣ ಪರಿಪೂರ್ಣ ಪತಿತಪಾವನ ಎನ್ನ | ಚರಣದ ಮಹಿಮೆಗಳ | ಅರಿಯಳು ಸಿರಿದೇವಿ ನರರೊಳಗೆ ಬಲುಹೀನ ನಾ ನಿನ್ನ ಮಹಿಮೆಗಳ ಅರಿತು ಪೇಳುವದಕ್ಕೆ ಅರಹ | ನಲ್ಲವೊ ಕೃಷ್ಣ ಮರಣದಲಿ ಅಜಮಿಳಗೆ ವಲಿದಿಯಂತೆ ನೀ ಎನಗೆ ತ್ವರಿತದಲಿಜ್ಞಾನವನು ದಯಮಾಡ ಬೇಕೈ | ಗಜರಾಜ ಅರ್ಭಕ ಧ್ರುವರಾಯ ನಿಜಜ್ಞಾನಿ ಪ್ರಹ್ಲಾದ ನಿಜಮುನಿ ಶುಕಾಚಾರ್ಯರಂತೆ | ಭಜಿಸುವ ನಾನಲ್ಲ | ಅಜಜನಕ ಅಪ್ರಾಕೃತ ಅಕಲಂಕ ಚರಿತ ಅಮರೇಂದ್ರ ವಂದಿತ | ಭುಜಗಶಯನ ಭೂಸುರವಂದ್ಯ ಭುವನತ್ರಯ ಪಾಲಾ ವಿಜಯನ ರಥವನ್ನು ಸಾರಥಿಯಾಗಿ ವಿಜಯ ಪಾರ್ಥರಿಗಿತ್ತು ಪರಿಪಾಲಿಪಾ ದಯಾಸಮುದ್ರ ವಿಜಯವಿಠ್ಠಲನೇ||2|| ತೃತೀಯ ವಚನ ಅರವಿಂದನಾಭ ಕೃಷ್ಣ ಅಖಿಲಜನ ಪರಿಪಾಲ | ಕೃಪಾ ಸಮುದ್ರ | ಶರದಿಂದು ನಿಭವಕ್ತ್ರ ರಾಜೀವದಳ ನೇತ್ರ ಲಕ್ಷ್ಮೀ ಕಳತ್ರ | ಪರಿಪಾಲಿಸಬೇಕೆನ್ನ | ಪಾವನ ಚರಿತ್ರ | ಸುರಪತಿಗೆ ಅಸುರರ ಬಲನೀಗಿ ಆ | ವಿರಂಚಿ ಬಳಿಗೆ | ಶರಣೆಂದು ವರವೊಂದು ಕೇಳಿದೆ ವೈಕುಂಠಪತಿ ಕೃಷ್ಣ | ತರಳನಾಗವತರಿಸಿ | ಸರ್ವಜನ ಕಂಟಕ ಕಂಸಾದಿಗಳ ಗೆಲಿದು | ಹರುಷದಿಂದೆನಗೆ ದರುಶನವ ಕೊಟ್ಟ | ಪರಮಾತ್ಮ ನಿನ್ನ ಪಾದ | ಸರಸಿಜದೊಳು ಚಿತ್ತವಿರುವಂದದಲಿ | ಪರಮ ದಯಾಕರ ನಿನ್ನ ಮಹಾ ಮಹಿಮೆಗಳ | ಅರಿತವರಿಲ್ಲವೊ ಈ ಭುವನತ್ರಯದೊಳಗೆ ಗರ್ವಿಷ್ಠನಾಗಿ ಮಲಗಿದವನಲ್ಲಿ | ಕರಿರಾಜವರದ ಕಾಮಿತ ಫಲಪ್ರದ ತರಳತನವನು ಬಿಟ್ಟು ವೈಕುಂಠದೊಳಗೆ ಮೆರೆದ ಸಂದರುಶನ | ಭರದಿ ಭಕ್ತಿಭಾವದಲಿ ಕೇಳ್ವ | ತ್ವರಿತದಲಿ ದಯಮಾಡಿ | ಭರದಿ ಪಾಲಿಸಬೇಕೆನ್ನ | ಭಕ್ತಜನ ವತ್ಸಲನೆ ಎನಲಾ ಮಾತಿಗೆ | ಮನುಮಥಜನಕ ಇನ | ಚಂದ್ರ ನೇತ್ರ ಇಂದಿರೆ ಅರಸ | ಹನುಮೇಶ ಕನಕಮಯವಾದ ಪೀತಾಂಬರ | ಜನಿವಾರ | ಅನೇಕ ಅತರಿಗಳ ಗೆಲಿವ ಕನಕಮಯ | ಕಿರೀಟ ಚತುರ್ಭುಜ | ವನಮಾಲೆ ಹಾಟಕದ | ಕಟಕ ರತ್ನಮಯದುಂ | ಗುರ ಪನ್ನಗಶಯ್ಯ ಉನ್ನತೋನ್ನತ ಮಹಿಮ ಕನಕಾಂಗಿ ಯಶೋದೆಗೆ | ತೋರಿದ ವಿಶ್ವರೂಪಪ್ರದ ಅನಿಮಿಷರ ಅರಸ ಅಹಿವೈರಿ ವಾಹನ ಅಚ್ಯುತ ಆನಂದ | ಗಿರಿ ನಿಲಯ | ಘನಘನ ಶಾರಂಙ್ಗಪಾಣಿ ವಿಜಯವಿಠ್ಠಲರೇಯ ತೋರಿದನು ತನ್ನ ಚರಣ ಸೇವಕನಾದ ಮುಚಕುಂದ ಚಕ್ರವರ್ತಿಗೆ ತನ್ನ ನಿಜರೂಪವ||3|| ಚತುರ್ಥ ವಚನ ಆನಂದತೀರ್ಥ ಮುನಿವಂದ್ಯ | ಜ್ಞಾನಿಗಳ ವಲ್ಲಭ | ದೀನಜನ ಮಂದಾರ ನಾ | ನಿನ್ನ ಮೊರೆಹೊಕ್ಕು ಧೇನಿಸಲರಿಯೆ | ಆನೆಯನು ಆದರದಿ ಕಾಯ್ದ ಶ್ರೀನಿವಾಸ | ಸಾನುರಾಗದಿ ಪ್ರಹ್ಲಾದಗೊಲಿದ ಶ್ರೀನಿಧಿ ನರಸಿಂಹ | ಅನಾದಿ ಕಾಲದಿ ತಂದೆ ಬಂಧು ಬಳಗವು ಎಂದೆ | ಮಾನಿನಿ ದ್ರೌಪದಿ ಮೊರೆ ಇಟ್ಟಾಗ ಧ್ವನಿ ಕೇಳಿ | ಮಾನಿನಿ ಮಣಿ ಲಕುಮಿಗ್ಹೇಳದೆ | ಆನಂದಮಯನು ಅಕ್ಷಯವಿತ್ತು ಆಗ ಪರಿಪಾಲಿಸಿದಿ ಅದರಂತೆ | ಮಾನಹೀನನೆಂದು ನಿರಾಕರಿಸದೆ | ಧ್ಯಾನಕ್ಕೆ ಒಳಗಾಗಿ | ಮೌನಿಜನರನು ಕಾವ ಕ್ಷೋಣೀಶ ಮಾಣಿಕ್ಯ ಮಕುಟ ಕುಂಡಲಧರ | ಅಣಿ ಮುತ್ತಿನ ಹಾರ ವನಮಾಲಿ ಸಿರಿ ತುಳಸಿ | ಪರಿಮಳ ಸಿರಿಗಂಧ ಉದರದಲಿ ಬೆಳಗುವ | ಉಪೇಂದ್ರ ನಾಮ ಕೃಷ್ಣ ಉರಗೇಶಶಯನಾ | ನಿನ್ನ ದಾಸರದಾಸನೆಂದೆನುತ | ಕಾಣಸಿ ನಿನ್ನ ನಿಜರೂಪ | ಎನ್ನ ಹೃದಯ ಪದಕದೊಳಗಿಟ್ಟು ಸಾನುರಾಗದಿ ನಿನ್ನ ಸ್ತೋತ್ರ ಮಾಡುವ ಭಕ್ತಗಣದೊಳಗೆ ನಿಲ್ಲಿಸೊ | ನಿನ್ನ ಮತ್ತೊಂದು ಪದಾರ್ಥ ಕೇಳುವವನಲ್ಲ | ತೀರ್ಥ ತೀರ್ಥಗಳಲ್ಲಿ ಮುಳುಗಿ ಬಂದವನಲ್ಲ | ಸಾರ್ಥಕವಾದಂಥ ಕೃತ್ಯ ಮಾಡುವನಲ್ಲ | ಸಾಧುಜನಸಂಗದಲಿ ಸೇರಿ ಪಾಡಿದವನಲ್ಲ | ಈ ನುಡಿ ಸತ್ಯವೇ ಲೇಸು ಪುಸಿಯಲ್ಲ | ಮಲ್ಲಮಲ್ಲರ ಗೆಲಿದ ಮಾಧವನು ನೀನಲ್ಲದೆ ಇನ್ನೊಂದು ದೈವವಿಲ್ಲದ ಮಧ್ವ ಮುನಿ ಹೃದಯಾಟ್ಟ ಪೀಠದೊಳು ವಾಸ ಮಾಡುವ ದೊರೆ ಉದ್ಧರಿಸಬೇಕೆನ್ನ ವಿಜಯವಿಠ್ಠಲನೆ ||4|| ಐದನೇ ವಚನ ಹರಿ ನಿನ್ನ ಚರಣ ಸೇವಕರ ಸೇವಕನೆನುತ | ಕರಿಯಬೇಕೆನ್ನ ಹಿರಿಯರೂ | ಮರಣಕಾಲಕ್ಕೆನಗೆ ಮತ್ತೋರ್ವ ವಿಷಯದಲಿ ಇಡಲಾಗದ ಮನಸು ಸರ್ವದಾ ನಿನ್ನ | ಚರಣಾರವಿಂದ ದ್ವಂದ್ವದಲಿ | ಭರದಿಂದ ಮುದ್ರೆಯನಿಟ್ಟ | ಕಾಗದದಂತೆ ಹತ್ತಿರಿರಬೇಕೆನುತ ತುತಿ ಮಾಡುವೆ ನಿನ್ನ | ಅರವಿಂದ ಗೋವಿಂದ ಮುಕುಂದ ಮುಚಕುಂದ ವರದ ನಿತ್ಯಾನಂದ ವಿಗ್ರಹ | ಸರಸಿರುಹಾಕ್ಷ ಸಜ್ಜನ ಪರಿಪಾಲಾ | ಅರವಿಂದಾಸನನಯ್ಯ ಅಮರೇಂದ್ರ ಪೂಜ್ಯ ಅವಗುಣ ವರ್ಜ ಅಕಳಂತ | ಚರಿತ ಆದಿಪುರುಷ ಮಧ್ಯಾಂತರಹಿತ ಮಹಾನುಭಾವ ಮಧ್ವೇಶ | ಕರಿರಾಜ ಪರಿಪಾಲ ಕಂಸಮರ್ದನ ಕೃಷ್ಣ ಕರುಣಾಳು ನೀನಲ್ಲದಿನ್ನೋರ್ವ ದೊರೆಯಿಲ್ಲ | ಈ ನುಡಿಯು ಪುಸಿಯಲ್ಲ | ಭರದಿಂದ ನೀ ಪರಿಪಾಲಿಸಬೇಕಲ್ಲದೆ ಕರ ಪಿಡಿದು ಕಾಯ್ವರನ ಕಾಣೆ ನಿನ್ನಾಣೆ ಹೇ ಚಕ್ರಪಾಣಿ | ನಾ ನಿನ್ನ ಚರಣಾವಿಂದವನು ಭಜಿಪ ವೀಣೆ | ಈ ಕ್ಷೋಣಿಯೊಳಗೆನ್ನ ನರಜನ್ಮವು ಬಾರದೆ ಪರಿಪಾಲಿಸಬೇಕೆನ್ನ | ಪರಮ ಪವಿತ್ರ ಪಂಕೇರುಹನೇತ್ರ ಸಂಕಟಗಳ ಕಳೆದು | ಸೌಖ್ಯಪದ ವೈಕುಂಠದೊಳಗೆನ್ನ ನಿಲ್ಲಿಸೊ | ಭರದಿಂದ ನಿನ್ನ ನಾಮದ ಭಂಡಾರ ಕದ್ದ ಕಳ್ಳನೆನೆಸಿ | ಚರಣದ್ವಯಗಳಿಗೆ ಭಕ್ತಿಸಂಕುಲ ಹಾಕಿ ಅರವಿಂದನಾಭ ನಿನ್ನ ಅಮರನೇ ವೈಕುಂಠ | ಕಾರಾಗೃಹದೊಳಗೆ ವಾಸ ಮಾಡಿಸು ದೇವ ಕೋಟಿ | ವರುಷಕೆ ಇದುವೆ ಎನಗೆ ಹರುಷ ಆನಂದಮಯ | ವರವ ಕೊಡುವದಕ್ಕರಹ ಪುರುಷ ನೀನಲ್ಲದೆ ಇನ್ನೋರ್ವನಿಲ್ಲ ವಿಜಯವಿಠ್ಠಲನೇ ||5||

Thoughts & Reflections

0

No reflections shared yet. Be the first to share your thoughts!

Share your thought