Bhasaka
← Back to home

ಸಾಧನಕ್ಕೆ ಬಗೆಗಾಣೆನೆನ್ನಬಹುದೆ

Author: ವಿಜಯದಾಸCategory: ಶ್ರೀಗುರು
ಸಾಧನಕ್ಕೆ ಬಗೆಗಾಣೆನೆನ್ನಬಹುದೆ ಸಾದರದಿ ಗುರುಕರುಣ ತಾ ಪಡೆದ ಬಳಿಕ ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ ಹಿಂಡು ಮಾತುಗಳೆಲ್ಲ ಹರಿಯ ನಾಮ ||1|| ವಾಗತ್ಯಪಡುವದೆ ವಿಧಿನಿಷೇಧಾರಚರಣೆ ರೋಗಾನುಭವವೆಲ್ಲ ಉಗ್ರತಪವು ಆಗದವರಾಡಿಕೊಂಬುವುದೆ ಆರ್ಶೀವಾದ ಬೀಗುರುಪಚಾರವೇ ಭೂತದಯವು ||2|| ಮೈಮರೆತು ಮಲಗುವುದೆ ಧರಣಿ ನಮಸ್ಕಾರ ಕೈಮೀರಿ ಹೋದದ್ದೆ ಕೃಷ್ಣಾರ್ಪಣ ಮೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯ ಹೋಯ್ಯಾಲಿತನವೆಲ್ಲ ಹರಿಯ ವಿಹಾರ ||3|| ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ ನಡೆದಾಡುವೋದೆಲ್ಲ ತೀರ್ಥಯಾತ್ರೆ ಬಡತನವು ಬರಲದೇ ಭಗವದ್ಭಜನೆಯೋಗ ಸಡಗರದಲ್ಲಿಪ್ಪುದೆ ಶ್ರೀಶನಾ ||4|| ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು ಯದೃಚ್ಛಾಲಾಭವೇ ಸುಖವುಯೆನಲು ಮಧ್ವಾಂತರ್ಗತ ಶ್ರೀ ವಿಜಯವಿಠ್ಠಲರೇಯ ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳನೆ ||5||

Thoughts & Reflections

0

No reflections shared yet. Be the first to share your thoughts!

Share your thought