Bhasaka
← Back to home

ಹರಿ ಮಾಡ್ದ ಮರ್ಯಾದೆ

Author: ವಿಜಯದಾಸCategory: ಶ್ರೀಕೃಷ್ಣ
ಹರಿ ಮಾಡ್ದ ಮರ್ಯಾದೆ ಅನುಭವಿಸಲೀ ಬೇಕು ಸರಸಿಜಭವಾದ್ಯರಿಗೆ ಬಿಡದು ವರಕಲ್ಪ ಕಲ್ಪದಲಿ ಮೀರಿದವರುಂಟೆ ನಿಂ ದಿರದಾವ ಜನುಮವಾಗೆ ಪ್ರಾಣಿ ವಾರಿಜಭವನ ನೋಡು ಮುನಿಶಾಪದಿಂ ಧಾರುಣಿಯೊಳು ಪೂಜೆ ತೊರೆದ ಪ್ರಾರಬ್ಧ ನಿರ್ದೋಷಿಗಾದರೂ ತಪ್ಪದವ- ತಾರವಿಲ್ಲದವನಾದನೋ ಪ್ರಾಣಿ||1|| ಜಗಕೆ ಗುರುವೆಂದೆನಿಸಿಕೊಂಡ ಪ್ರಾಣನ ನೋಡು ಯುಗದೊಳಗೆ ಕೋತ್ಯಾದನಲ್ಲೋ ಮಗುಳೆ ಮಾತನು ಕೇಳು ಕಚ್ಚುಟವ ಧರಿಸಿದ ಅಗಣಿತ ಸತ್ವನಿಗೆ ಈ ಪರಿಯೆ ಪ್ರಾಣಿ ||2|| ಶಿವನ ನೋಡೋ ಮರುಳೆ ದೂರ್ವಾಸ ಮುನಿಯಾಗಿ ಅವನಿಪತಿ ಮೊರೆ ಹೊಕ್ಕನಲ್ಲೊ ಭುವನದೊಳಗೆಂದೆಂದು ವ್ರಣದಿಂದ ದುರ್ಗಂಧ ಸ್ರವಿಸುವುದು ಶಿರಸಿನಲ್ಲೀ ಪ್ರಾಣಿ ||3|| ಇಂದ್ರ ತರ್ಕವನೋದಿ ನರಿಯಾದ ಪರಸತಿ- ಯಿಂದ ಮೇಷ ವೃಷಣನಾಭ ಕಂದರ್ಪ ಶರೀರದಿಂದ ನಾಶನನಾಗಿ ಬಂದ ಮೀನಿನ ಗರ್ಭದಿಂದ ಪ್ರಾಣಿ||4|| ಸೂರ್ಯ ಚಂದ್ರರ ನೋಡು ಮೂಲ ರೂಪದಿ ಪರ ಭಾರ್ಯರಿಗೆ ಶಿಲುಕಿ ತಮ್ಮಾ ವೀರ್ಯವನು ಕಳಕೊಂಡು ಬರಿದಾದರೋ ಕರ್ಮ- ಕಾರ್ಯ ವಾರಿಗು ಬಿಡದೆಲೋ ಪ್ರಾಣಿ ||5|| ಪಾವಕನು ಸರ್ವಭಕ್ಷಕನಾದ ಮಿಕ್ಕಾದ ಅವಾವ ಸುರರ ಕರ್ಮಂಗಳ ಯಾವತ್ತು ವರ್ಣಿಸಲಳವಲ್ಲ ಎಚ್ಚತ್ತು ಪಾವನ್ನ ನೀನಾಗೆಲೋ ಪ್ರಾಣಿ ||6|| ಆವಾವ ಸ್ಥಳದಲ್ಲಿ ಜನನ ಸ್ಥಿತಿಗತಿ ಮತ್ತೆ ಸಾವು ಸಾಕಲ್ಯದಿ ಮರೆಯದಲೆ ದೇವದೇವನು ಕ್ಲುಪ್ತ ಮಾಡಿಪ್ಪನೋ ಅದನು ಆವನಾದರು ಮೀರಲೊಳವೇ ಪ್ರಾಣಿ ||7|| ಉಣಬೇಕು ಉಣಬೇಕು ಮತ್ತೆ ಉಣಲೀಬೇಕು ತ್ರಿ-ಗುಣ ಕಾರ್ಯರ ಭವಣೆ ಮನುಜ ತೃಣ ಜನ್ಮ ಬಂದ ಕಾಲಕ್ಕು ತ್ರೈತಾಪಗಳು ಅಣುಮಾತ್ರವೂ ತಪ್ಪವೋ ಪ್ರಾಣಿ ||8|| ಧೀರನಾಗಲಿ ಮಹಾಶೂರನಾಗಲಿ ಮತ್ತೆ ಧಾರುಣೀಪತಿ ಭಾಗ್ಯನಾಗೆ ಆರಿಗಾದರು ಬಿಡದು ಪರೀಕ್ಷಿತರಾಯನು ನೀರೊಳಗಿದ್ದ ತಿಳಿಯೋ ಪ್ರಾಣಿ ||9|| ಜಲಗಿರಿವನ ಪೊದೆ ಹೊದರು ಗಹ್ವರ ಹುತ್ತ- ಬಿಲ ಸಪ್ತದ್ವೀಪ ಪಾತಾಳದಿ ಹಲವು ನಭ ಸ್ವರ್ಗಾದಿಲೋಕ ಜನನಿಯ ಜಠರ- ದೊಳಗಿರೆ ತಪ್ಪುವುದೆ ಬರಹಾ ಪ್ರಾಣಿ ||10|| ಅಣಿಮಾದಿ ಅಷ್ಟಾಂಗ ಯೋಗ ಮಾಡಲು ಮಹಾ ಗುಣವಂತ ಜನರು ಒಂದು ಕ್ಷಣವ ಮೀರಲುಬಹುದೆ ಮೃತ್ಯು ಬಂದೆದುರಾಗಿ ಸೆಣಸುತಿರೆ ಬೇರುಂಟೆ ಕಾರ್ಯ ಪ್ರಾಣಿ ||11|| ಎಲ್ಲೆಲ್ಲೆ ಅನ್ನ ಮತ್ತೆಲ್ಲೆಲ್ಲಿ ಉದಕ ಇ- ನ್ನೆಲ್ಲೆಲ್ಲಿ ನಿದ್ರೆ ಜಾಗರಣಿಯೊ ಎಲ್ಲೆಲ್ಲಿ ಹೆಜ್ಜೆಗಳನಿಡುವ ಪರಿಮಿತಿಯುಂಟೊ ಅಲ್ಲಿಲ್ಲಿಗೊಯ್ಯುವುದೊ ಬಿಡದೆ ಪ್ರಾಣಿ ||12|| ಧಿಕ್ಕಾರ ಸತ್ಕಾರ ನಿಂದೆ ವಂದನೆಗಳು ರೊಕ್ಕಾ ಸುಖ ದುಃಖ ಕಾರಣಗಳು ಉಕ್ಕೇರಿದಂತೆ ಬರುತಿಹುದೊ ನಮ್ಮ ದೇ- ವಕ್ಕಿ ಕಂದನ ಆಜ್ಞಯಿಂದ ಪ್ರಾಣಿ ||13|| ಕಾಶಿಯಲ್ಲಿರೆ ಮರಣ ಆವಲ್ಲಿ ಇಪ್ಪುದಾ- ದೇಶಕ್ಕೆ ಒಯ್ಯುವುದು ಕಾಲ ಕಾಶಿರಾಯನ ನೋಡು ಒಡನೆ ಅಪಮೃತ್ಯು ವೇದ- ವ್ಯಾಸರಿದ್ದರು ತಪ್ಪಲಿಲ್ಲ ಪ್ರಾಣಿ ||14|| ಮಾರುತ ಭಾರತಿ ಶೇಷ ಶಿವ ಪಾರ್ವತಿ- ಸರಸಿಜ ಬಾಂಧವಾಗ್ನಿ ಧರ್ಮ ತರುವಾಯ ಕಾಲ ಮೃತ್ಯು ಕಾಲನ ದೂತರು ಅರಸುತಿಪ್ಪರು ಲವ ತೃಟಿಯ ಪ್ರಾಣಿ ||15|| ಇವರಿವರಿಗುತ್ತಮರು ಇವರಿವರಗಧಮರು ಇವರೆಲ್ಲರಿಗೆ ಶ್ರೀ ಭೂಮಿ ದುರ್ಗಾ ಅವಳಿಗೆ ಶ್ರೀ ಹರಿಯು ತಾನೆ ನಿಯಾಮಕನು ವಿವರದಲಿ ತಿಳಿ ತಾರತಮ್ಯ ಪ್ರಾಣಿ ||16|| ಲಕುಮಿ ಮೊದಲು ಮಾಡಿ ಇವರೆಲ್ಲರಿಗೆ ಲೇಶ ಶಕುತಿಯಿಲ್ಲವೊ ಕಾಣೊ ಮರುಳೆ ಅಕಟಕಟ ಗುಣಪೂರ್ಣ ಸರ್ವ ಸ್ವಾತಂತ್ರ ವ್ಯಾ- ಪಕ ಸರ್ವಾಂತರ್ಯಾಮಿಯೆನ್ನೋ ಪ್ರಾಣಿ ||17|| ಗುರು ಪರಂಪರ ವಾಯು ಲಕುಮಿ ನಾರಾಯಣನ ಕರುಣಾ ಕಟಾಕ್ಷವುಳ್ಳನಕ ಸುರ ನರೋರಗ ಯಕ್ಷಲೋಕದಲ್ಲಿದ್ದವರು ಬರಿದೆ ಕೂಗಿದರೇನು ಆಹುದೋ ಪ್ರಾಣಿ ||18|| ಆವಾವ ಕಾಲ ತಪ್ಪಿಸಿ ಕಾವ ಹರಿತಾನು ಸಾವ ಕಾಲವ ಮಾತ್ರ ತಪ್ಪಿಸನೋ ಕಾವ ಕೊಲ್ಲುವ ಸ್ವಾಮಿ ಕಾಲನಾಮಕ ಪುರುಷ ಜೀವಿಗಳು ಮುಖ್ಯವಲ್ಲ ಕಾಣೋ ಪ್ರಾಣಿ ||19|| ಭಗವವಸ್ವತಂತ್ರವನು ತಿಳಿಯದೆ ಮರುಳಾಗಿ ಜಗದೊಳಗೆ ಚರಿಸದಿರೊ ಮಾನವ ಅಘ ದೂರನಾಗೊ ನಾನಾ ಬಗೆಯಿಂದಲ- ನ್ಯಗರ ಚಿಂತೆಗಳಲ್ಲಿ ಬಿಟ್ಟು ಪ್ರಾಣಿ ||20|| ಹಲವು ಮಾತೇನಿನ್ನು ದಾಸಭಾವವ ವಹಿಸಿ ಕಲಿಯುಗದೊಳಗೆ ಸಂಚರಿಸೆಲೊ ಬಲವಂತ ವಿಜಯವಿಠ್ಠಲನ ಪಾದಾಂಬುಜವ ನಿಲಿಸಿ ವಲಿಸಿಕೊ ಮನಸಿನಲ್ಲಿ ಪ್ರಾಣಿ ||21||

Thoughts & Reflections

0

No reflections shared yet. Be the first to share your thoughts!

Share your thought