Bhasaka
← Back to home

ಹಿಗ್ಗದಿರು ಹಿಗ್ಗದಿರು ಮನುಜಪಶುವೆ

Author: ವಿಜಯದಾಸCategory: ಶ್ರೀಕೃಷ್ಣ
ಹಿಗ್ಗದಿರು ಹಿಗ್ಗದಿರು ಮನುಜಪಶುವೆ | ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ | ಶ್ರೇಯದಲಿ ದಶರಥ ನಹುಷನೇನೊ || ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ | ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ ||1|| ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ | ಘೋರ ತಪಸಿನಲಿ ವಿಶ್ವಾಮಿತ್ರನೇನೊ || ವಿರುಕುತಿಯಲಿ ಸುರಸೈನ್ಯ ನಾಯಕನೇನೊ | ಹಾರುವ ಬಿಂಕದಲಿ ಗರುಡ ನೀನೇನೊ ||2|| ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ | ತಿಳಿವಳಿಕೆಯಲಿ ವಿದುರ ಸಂಜಯನೇನೊ || ಒಲಿದು ಪಾಡುವಲಿ ನಾರದ ತುಂಬುರನೇನೊ | ಛಲ ಮಾಡುವಲ್ಲಿ ಧ್ರುವರಾಯ ನೀನೇನೊ ||3|| ಭಕುತಿಯಲಿ ಪ್ರಹ್ಲಾದ ಪುಂಡರೀಕನೇನೊ | ಭುಕುತಿಯಲಿ ಅಗಸ್ತ್ಯ ಬಕ ನೀನೇನೊ || ಉಕುತಿಯಲಿ ಸೂತ ಸಹದೇವ ಶೌನಕನೇನೊ | ಶಕುತಿಯಲಿ ವಾಲಿ ಯಮರಾಯ ನೀನೇನೊ ||4|| ಯೋಗದಲಿ ಶುಕ ಜನಕ ಸನಕಾದಿಗಳೇನೊ | ತ್ಯಾಗಮಾಡುವಲ್ಲಿ ಕರ್ಣ ನೀನೇನೊ || ಭೋಗ ಬಡುವಲ್ಲಿ ಮಹಾಭಾಗ ಇಂದ್ರನೇನೊ | ವೇಗದಲಿ ಪುರುಷ-ಮೃಗನು ನೀನೇನೊ ||5|| ಸಖತನ ಮಾಡುವಲ್ಲಿ ಶ್ವೇತವಾಹನನೇನೊ | ನಿಖಿಳ ಕಥೆ ಕೇಳುವಲ್ಲಿ ಪರೀಕ್ಷಿತನೇನೊ || ಅಖಿಳರನು ಗೆಲುವಲ್ಲಿ ಕಾರ್ತವೀರ್ಯನೇನೊ | ಸುಖದಲ್ಲಿ ಇಪ್ಪದಕೆ ಪವನ ನೀನೇನೊ ||6|| ವಿತ್ತದಲಿ ನೀನು ವೈಶ್ರವಣನೇನೊ | ಮತ್ತೆ ಕ್ಷಮೆಯಲಿ ಹರಿಶ್ಚಂದ್ರನೇನೊ | ಭೃತ್ಯತನ ಪಡೆವಲ್ಲಿ ಅಕ್ರೂರ ನೀನೇನೊ | ಸುತ್ತವಲಿ ಪ್ರಿಯವ್ರತ ರಾಯನೇನೊ ||7|| ವ್ರತದಲ್ಲಿ ಅಂಬರೀಷ ರುಕುಮಾಂಗದನೇನೊ | ಸ್ತುತಿಯಲ್ಲಿ ಮುಚುಕುಂದರಾಯನೇನೊ || ಅತಿ ಚೆಲುವತನದಲ್ಲಿ ಮನ್ಮಥ ನಕುಲನೇನೊ | ಕ್ರತು ಮಾಡುವಲ್ಲಿ ಧರ್ಮಪುತ್ರ ನೀನೇನೊ||8|| ಶಾಪಗಳ ಕೊಡುವಲ್ಲಿ ಬ್ರಹ್ಮಪುತ್ರನೇನೊ | ತಾಪ ತೋರುವಲ್ಲಿ ರವಿ ಅನಳನೇನೊ | ಕೋಪ ಮಾಡುವಲ್ಲಿ ಗಿರಿಜಾರಮಣನೇನೊ | ತಾಪಸಿರ ನಡುವೆ ವಸಿಷ್ಠ ನೀನೇನೊ||9|| ಉನ್ನತದಲಿ ನೀನು ಮೇರು ಪರ್ವತನೇನೊ | ಘನ ಮದದಲಿ ಧೃತರಾಷ್ಟ್ರನೇನೊ || ಇನ್ನು ಮತಿಯನ್ನು ಕೊಡುವಲಿ ಗಜಮೊಗನೇನೊ | ಮುನ್ನೆ ಕವನದಲ್ಲಿ ಶುಕ್ರದೇವನೇನೊ ||10|| ಹಮ್ಮಿನಲಿ ಬಾಳದಿರು ಹಿತವಾಗದೊ ನಿನಗೆ | ಆ ಮಹಿಮರ ಸರಿ ನೀನಲ್ಲವೊ || ಸುಮನಸರೊಡೆಯ ಸಿರಿ ವಿಜಯವಿಠ್ಠಲರೇಯನ್ನ | ನೆಮ್ಮಬೇಕಾದರೆ ಸೋಹಂ ನಿರಾಕರಿಸು||11||

Thoughts & Reflections

0

No reflections shared yet. Be the first to share your thoughts!

Share your thought