Bhasaka
← Back to home

ಬಂದು ನಿಂದಿಹ ನೋಡಿ

Author: ಪುರಂದರದಾಸCategory: ಶ್ರೀಕೃಷ್ಣRaaga: ಮಧ್ಯಮಾವತಿTaala: ತ್ರಿಪುಟತಾಳ
ಬಂದು ನಿಂದಿಹ ನೋಡಿ ಭೂತಳದಿ ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ ನಿರಂತರ ಪೊಂದಿ ಭಜನೆಯ ಮಾಡಿ ಆನಂದಗೂಡಿ || ವಂದಿಸುತ ಮನದೊಳಗೆ ಇವನಡಿ ದ್ವಂದ್ವ ಭಜಿಸಲು ಬಂದ ಭಯಹರ ಇಂದುಧರ ಸುರವೃಂದನುತ ಗೋ- ವಿಂದ ಕರುಣಾಸಿಂಧು ಶ್ರೀಹರಿ || ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ- ಗಾರ ನಿಧಿ ಕೊರಳಲ್ಲಿ ಮುತ್ತಿನಲಿ ಶೋಭಿಪ ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ || ವಾರವಾರಕೆ ಪೂಜೆಗೊಂಬುವ ಹಾರ ಮುಕುಟಾಭರಣ ಕುಂಡಲ ಧಾರ ಭುಜ ಕೇಯೂರಭೂಷಿತ ಮಾರಪಿತ ಗುಣ ಮೋಹನಾಂಗ || ಚಾರು ಪೀತಾಂಬರ ಕಟೀ ಕರ - ವೀರ ಕಲ್ಹಾರಾದಿ ಪೂವಿನ ಹಾರ ಕೊರಳೊಳು ಎಸೆವುತಿರೆ ವದ - ನಾರವಿಂದನು ನಗುತ ನಲಿಯುತ || ಎಲ್ಲ ಭಕುತರಭೀಷ್ಟ ಕೊಡುವುದಕೆ ತಾ ಕೈ- ವಲ್ಯಸ್ಥಾನವ ಬಿಟ್ಟ ಶೇಷಾದ್ರಿಮಂದಿರ ದಲ್ಲಿ ಲೋಲುಪ ದಿಟ್ಟ ಸೌಭಾಗ್ಯನಿಧಿಗೆದು - ರಿಲ್ಲ ಭುಜಬಲಪುಷ್ಪ ಕಸ್ತೂರಿಯಿಟ್ಟ || ಚೆಲುವಫಣೆಯಲಿ ಶೋಭಿಸುವ ಸಿರಿ ವಲ್ಲಭನ ಗುಣ ಪೊಗಳದಿಹ ಜಗ ಖುಲ್ಲರೆದೆದಲ್ಲಣ ಪರಾಕ್ರಮ ಮಲ್ಲಮರ್ದನ ಮಾತುಳಾರಿ || ಫಲ್ಗುಣನ ಸಖ ಪ್ರಕಟನಾಗಿಹ ದುರ್ಲಭನು ಅಘದೂರ ಬಹು ಮಾಂ - ಗಲ್ಯ ಹೃದಯನು ಸೃಷ್ಟಿಗೆ ಉಲ್ಲಾಸ ಕೊಡುತಲಿ ಚಂದದಿಂದಲಿ || ಪದಕ ಕೌಸ್ತುಭಧಾರ ಸರಿಗೇಯ ಕಂದರ ಸುದರುಶನಧರ ಧೀರ ಸುಂದರ ಮನೋಹರ ಪದಯುಗದಿ ನೂಪೂರ ಇಟ್ಟಿಹನು ಸನ್ಮುನಿ ಹೃದಯಸ್ಥಿತ ಗಂಭೀರ ಬಹುದಾನಶೂರ || ವಿಧಿಭವಾದ್ಯರ ಪೊರೆವ ದಾತನು ತುದಿಮೊದಲು ಮಧ್ಯಮವಿರಹಿತನು ಉದುಭವಾದಿಗಳೀವ ಕರ್ತನು ತ್ರಿದಶ ಪೂಜಿತ ತ್ರಿಭುವನೇಶ || ಸದುವಿಲಾಸದಿ ಸ್ವಾಮಿ ತೀರ್ಥದಿ ಉದಿಸುತಿರೆ ಸಿರಿಮಹಿಳೆ ಸಹಿತದಿ ಪದುಮನಾಭ ಪುರಂದರ ವಿಟ್ಠಲ ಮುದದಿ ಬ್ರಹ್ಮೋತ್ಸವದಿ ಮೆರೆಯುತ ||

Thoughts & Reflections

0

No reflections shared yet. Be the first to share your thoughts!

Share your thought