Bhasaka
← Back to home

ಸಂಸಾರವ ನಿರ್ವಾಣವ ಮಾಡಿ

Author: ಅಕ್ಕಮಹಾದೇವಿCategory: ವಚನಗಳು
ಸಂಸಾರವ ನಿರ್ವಾಣವ ಮಾಡಿ, ಮನವ ವಜ್ರತುರಗವ ಮಾಡಿ, ಜೀವವ ರಾವುತನ ಮಾಡಿ, ಮೇಲಕ್ಕೆ ಉಪ್ಪರಿಸಲೀಯದೆ, ಮುಂದಕ್ಕೆ ಮುಗ್ಗರಿಸಲೀಯದೆ ಈ ವಾರುವನ ಹಿಂದಕ್ಕೆ ಬರಸೆಳೆದು ನಿಲಿಸಿ, ಮೋಹರವಾಗಿದ್ದ ದಳದ ಮೇಲೆ, ಅಟ್ಟಿ ಮುಟ್ಟಿ ತಿವಿದು ಹೊಯಿದು ನಿಲಿಸಲಎರಿಯದೆ, ಧವಳಬಣ್ಣದ ಕೆಸರುಗಲ್ಲ ಮೆಟ್ಟಿ ತೊತ್ತಳದುಳಿವುತ್ತಲು ಇದಾರಯ್ಯಾ. ಅಂಗಡಿಯ ರಾಜಬೀದಿಯೊಳಗೆ ಬಿದ್ದ ರತ್ನಸೆಟ್ಟಿ ಈ ಥಳಥಳನೆ ಹೊಳವ ಪ್ರಜ್ವಲಿತವ ಕಾಣದೆ ಹಳಹಳನೆ ಹಳಸುತ್ತೈದಾರೆ ಅಯ್ಯಾ. ಆಧಾರಸ್ಥಾನದ ಇಂಗಳವನಿಕ್ಕಿ ವಾಯು ಪವನದಿಂದ ನಿಲಿಸಲು, ಆ ಅಗ್ನಿಯ ಸೆಕೆ ಹೋಗಿ ಬ್ರಹ್ಮರಂಧ್ರವ ಮುಟ್ಟಲು, ಅಲ್ಲಿರ್ದ ಅಮೃತದ ಕೊಡನೊಡೆದು ಕೆಳಗಣ ಹೃದಯಸ್ಥಾನದ ಮೇಲೆ ಬೀಳಲ್ಕೆ, ಮರಸಿದ ಮಾಣಿಕ್ಯದ ಬೆಳಗು ಕಾಣಬಹುದು. ಇದನಾರಯ್ಯಾ ಬಲ್ಲರು ಹಮ್ಮಳಿದ ಶರಣರ ಮೇಲೆ ? ಇಹಪರವ ಬಲ್ಲ ಶರಣ, ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ. ಒಡಲ ಬಿಟ್ಟ ಶರಣನಲ್ಲದೆ ಉಳಿದ ಪ್ರಾಣಘಾತಕ ಪಾತಕರಿವರೆತ್ತಲು, ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಸವಣ್ಣಂಗಲ್ಲದೆ ?

Thoughts & Reflections

0

No reflections shared yet. Be the first to share your thoughts!

Share your thought