Bhasaka
← Back to home

ಹಾಲಹಿಡಿದು ಬೆಣ್ಣೆಯನರಸಲುಂಟೆ ?

Author: ಅಕ್ಕಮಹಾದೇವಿCategory: ವಚನಗಳು
ಹಾಲಹಿಡಿದು ಬೆಣ್ಣೆಯನರಸಲುಂಟೆ ? ಲಿಂಗವಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ? ಲಿಂಗದ ಪಾದತೀರ್ಥ ಪ್ರಸಾದವ ಕೊಂಡು ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ ? ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ. ಅದೆಂತೆಂದಡೆ ಶಿವಧರ್ಮಪುರಾಣದಲ್ಲಿ 'ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಸ್ಯ ಪೂಜಕಃ ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್' || ಎಂದುದಾಗಿ, ಇದನರಿದು ಗುರು ಕೊಟ್ಟ ಲಿಂಗದಲ್ಲಿಯೆ ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ. ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ, ತೀರ್ಥಲಿಂಗವ ಹಿರಿದುಮಾಡಿ ಹೋದಾತಂಗೆ ಅಘೋರ ನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನಾ.

Thoughts & Reflections

0

No reflections shared yet. Be the first to share your thoughts!

Share your thought