Bhasaka
← Back to home

ಶ್ರೀ ವಿವೇಕಾನಂದ ಗುರುವರ

Author: ಕುವೆಂಪುCategory: ಶ್ರೀಸ್ವಾಮಿ ವಿವೇಕಾನಂದRaaga: ಮಾಲಕೌಂಸ್Taala: ತೇವರಾ
ಶ್ರೀ ವಿವೇಕಾನಂದ ಗುರುವರ ನವಯುಗಾಚಾರ್ಯ ರಾಮಕೃಷ್ಣರ ಭೀಮಶಿಷ್ಯನೆ, ವೀರವೇದಾಂತಿ ಭಾರತಾಂಬೆಯ ಧೀರಪುತ್ರನೆ ಸಾಧುಭೈರವನೆ ಸ್ಥೈರ್ಯದಚಲವೆ ಧೈರ್ಯದಂಬುಧಿ, ಜಯತು ಜಯ ಜಯತು || ಚಿದ್ಋತಾಗ್ನಿಯ ಚಂಡಕಾಂತಿಯೆ ಮೇರುಸಂನ್ಯಾಸಿ ಭರತಖಂಡದ ನಂದಿದಿದ್ದಲಿಗಿತ್ತೆ ತೇಜವನು ಬೊಮ್ಮದಂಬುಧಿಗಲೆಯನೀಯುವ ಭರದ ಬಿರುಗಾಳಿ ಬೂದಿಮುಚ್ಚಿದ ಭರತಭೂಮಿಯನೂದಿ ಬೆಳಗಿಸಿದೆ || ಭರತಖಂಡದೊಳರಚುತಲೆಯುವ ಮನುಜಕುರಿಗಳಿಗೆ ಸಿಂಹಹೃದಯವನಿತ್ತು ಗರ್ಜಿಸುವಂತೆ ನೀ ಮಾಡಿ ಕುರಿಯದೊಡ್ಡಿಯ ಮುರಿದು ಸಿಂಹದ ಗುಹೆಯ ವಿರಚಿಸಿದೆ ಸಿಂಹಹೃದಯನೆ ಶ್ರೀ ವಿವೇಕಾನಂದಯೋಗೀಂದ್ರ || ನಿಶೆಯ ಗಗನದೊಳಿರುವ ತಾರೆಯ ತೆರದಿ ರಂಜಿಸಿದೆ ಜಗದ ಕಂಗಳು ನೋಡಲಾರದೆ ನಿನ್ನ ತೇಜವನು ವಿಸ್ಮಯಾಶ್ಚರ್ಯದಲಿ ನಿಂತವು ಮೂಗುವೆರಗಾಗಿ ನಿನ್ನ ಮಹಿಮೆಯ ಸವಿವ ಸೆರೆಯೇ ಮುಕ್ತಿ, ವರಯೋಗಿ || ಮೊರೆದು ಗರ್ಜಿಪ ಕಡಲವಾಣಿಯು ನಿನ್ನ ವರವಾಣಿ ಕಾರಮಿಂಚನು ನಗುವ ತೇಜವು ನಿನ್ನ ಮೈಕಾಂತಿ ಆಳವಂಬುಧಿಯಾಳ, ಮೇರೆಯು ನಭದ ವಿಸ್ತಾರ ಮಂದರಾದ್ರಿಯ ಮೀರಿದಚಲನು ನೀನು, ಯೋಗೀಂದ್ರ || ಬ್ರಹ್ಮವಿದ್ಯೆಯ ದಿವ್ಯದೀಪ್ತಿಯ ದೇಶದೇಶದಲಿ ಹರಡಿ, ಅಭಯವನೀಯುತಮೃತವ ಸುರಿದು ಪಾಲಿಸಿದೆ ಗಗನಕೆತ್ತಿದೆ ಭಾರತಾಂಬೆಯ ಕೀರ್ತಿಕೇತನವ ಓಜೆ ತುಂಬಿಹುದಾರ್ಯಮಾತೆಯ ಶ್ರೀನಿಕೇತನವ || ನಿನ್ನ ಹೆಸರದೆ ಶಕ್ತಿಯೀಯುವ ದಿವ್ಯತರಮಂತ್ರ ನಿನ್ನ ಮಾರ್ಗವೆ ಮುಕ್ತಿದಾಯಕವಾದ ವರಮಾರ್ಗ ನಮ್ಮ ಹೃದಯಕೆ ಹೃದಯ ನೀನಯ್, ಶಕ್ತಿಸಾಗರನೆ ಯಮನ ನುಂಗಿದ ರಾಜಯೋಗಿಯೆ, ರುದ್ರಸಂನ್ಯಾಸಿ || ನಿನ್ನ ಧೈರ್ಯ ಸ್ಥೈರ್ಯ ದೃಢತೆಯು, ನಿನ್ನ ಪವಿಶಕ್ತಿ ಭಾರತೀಯರಿಗಿಂದು ಬೇಕಾಗಿಹುದು ದಿವ್ಯಾತ್ಮ ರುದ್ರನರ್ತನವೆಸಗು ಹೃದಯದಿ, ಬುದ್ಧಿ ಭೈರವನೇ ರುದ್ರಭೂಮಿಗಳಾಗಲೆಮ್ಮೀ ಕ್ಷುದ್ರಹೃದಯಗಳು ||

Thoughts & Reflections

0

No reflections shared yet. Be the first to share your thoughts!

Share your thought