Bhasaka
← Back to home

ಈ ಮತ್ರ್ಯಧೂಳಿಯಲಿ

Author: ವಚನವೇದCategory: ಶ್ರೀಗುರುRaaga: ಸೋಹಿನೀTaala: ಝಪತಾಲ
ಈ ಮರ್ತ್ಯ ಧೂಳಿಯಲಿ ಹುಟ್ಟಿಬೆಳೆದವು ನಾವು ಈ ಧೂಳಿಯಲಿ ದೃಷ್ಟಿ ಕುರುಡಾಯಿತು | ಈ ಮಣ್ಣಿನಲಿ ನಾವು ಮಕ್ಕಳಂತಾಡಿದೆವು ಅಭಯವನು ನೀಡಯ್ಯ ದಿವ್ಯಗುರುವೆ || ನಮ್ಮ ಏನೋ ಒಂದು ಅಲ್ಪ ತಪ್ಪಿಗೆ ನೀನು ನಿನ್ನ ಮಡಿಲಿಂದಾಚೆ ನೂಕಲಿಹೆಯಾ | ನೀನೆ ನಮ್ಮನ್ನು ತಳ್ಳಿ ಅನಾಥರಂದದಲಿ ತೊಳಲಿಸುವೆಯಾ ನಮ್ಮ ಬಳಲಿಸುವೆಯಾ || ಹೇ ಪ್ರಭುವೆ ಹಾಗೆಂದಿಗೂ ಗೈಯಬೇಡ ನಮ್ಮನೆಂದಿಗು ಆಚೆ ನೂಕಬೇಡ | ನಾವು ಅಲ್ಪರು ಗುರುವೆ, ಸಿಟ್ಟಾಗದಿರು ಪ್ರಭುವೆ ಮೃದುನುಡಿಯೊಳೆಮ್ಮೊಡನೆ ಮಾತನಾಡು || ನಿನ್ನೆದುರು ನಾವೆಲ್ಲ ಬರಿಯ ಹಸುಳೆಗಳಯ್ಯ ಹೆಜ್ಜೆಹೆಜ್ಜೆಗು ಎಡವಿ ಬೀಳುತಿಹೆವು | ಇದನರಿತರೂ ನೀನು ರುದ್ರಮುಖ ಭ್ರುಕುಟಿಯೊಳು ನಮ್ಮನೇತಕೆ ಇಂತು ನಡುಗಿಸುತಿಹೆ || ನೂರು ಸಲ ನೀನೆತ್ತಿ ನಿಲ್ಲಿಸಿದರೂ ಕೂಡ ನೂರು ಸಲ ಬೀಳುವುದು ನಮ್ಮ ಪಾಡು | ಇಂಥ ದುರ್ಬಲಮತಿಯ ಕರುಣದಿಂದಲಿ ನೋಡು ಮೃದುನುಡಿಯೊಳೆಮ್ಮೊಡನೆ ಮಾತನಾಡು ||

Thoughts & Reflections

0

No reflections shared yet. Be the first to share your thoughts!

Share your thought