Bhasaka
← Back to home

ವಿದುರನ ಭಾಗ್ಯವಿದು

Author: ಪುರಂದರದಾಸCategory: ಶ್ರೀಕೃಷ್ಣRaaga: ಪಹಾಡೀTaala: ದೀಪಚಂದ್
ವಿದುರನ ಭಾಗ್ಯವಿದು || ಇದ ಕಂಡು ಜಗವೆಲ್ಲ ತಲೆದೂಗುತಿಹುದು || ಕುರುರಾಯನು ಖಳನನುಜನು ರವಿಜನು ಗುರುಗಾಂಗೇಯರು ನೋಡುತಿರೆ | ಹರಿಸಿ ರಥವನು ಬೀದಿಯಲಿ ಬರುತಲಿಹ ಹರಿಯನು ಕಂಡನು ಹರುಷದಲಿ || ದಾರಿಲಿ ಬರುತಿಹ ಮುರವೈರಿಯನು ಕಂಡು ಹಾರುತ ಚೀರುತ ಕುಣಿಯುತಲಿ | ಹರುಷದ ಕಂಬನಿ ಧಾರೆಯ ಸುರಿಸುತ ಬಾರಿಬಾರಿಗು ಸಂತೋಷದಿ ಹಿಗ್ಗುವ || ಆಟಕೆ ಲೋಕಗಳೆಲ್ಲವ ಸೃಜಿಸುವ ನಾಟಕಧರ ತನ್ನ ಲೀಲೆಯಲಿ | ನೀಟಾದವರ ಮನಗಳ ಜರಿದು ಕುಟೀರದಲಿ ಬಂದು ಕುಳಿತ ಹರಿ || ಅಡಿಗಡಿಗೆ ತನ್ನ ತನುಮನ ಹರಹಿ ಅಡಿಗೆರಗುತ ಗದ್ಗದ ಸ್ವರದಿ | ನುಡಿಗಳು ತೊದಲಲು ರೋಮಾಂಚನವಾಗಲು ದುಡುದುಡು ಓಡುತ ದಶದಿಶೆಗೆ || ಕಂಗಳ ಉದಕದಿ ಪಾದವ ತೊಳೆದು ಗಂಧವ ಪೂಸಿ ತನು ಮರೆದು | ಮಂಗಳ ಮಹಿಮನ ಚರಣಕ್ಕೆರಗಿ ಪುಷ್ಪಂಗಳ ಪೂಜೆಯ ಮಾಡಿದನು || ಕ್ಷೀರವಾರಿಧಿಶಯನಗೆ ಆ ವಿದುರನು ಕ್ಷೀರವನುಣಬಡಿಸಿದ ಅದನು | ವಾರಿಜನಾಭನು ಕರಸಂಪುಟದಿ ಆರೋಗಣಿಸಿದನು ಘನತೆಯಲಿ || ಒಂದು ಕುಡುತೆ ಹಾಲ ಹರಿಯು ತಾ ಸವಿದು ಮುಂದಕೆ ಹರಿಸಿದ ಧರೆಯ ಮೇಲೆ | ಇಂದಿರೆಯರಸನ ಚರಿತೆ ವಿಚಿತ್ರವು ಚಂದದಿ ಹರಿಯಿತು ಬೀದಿಯಲಿ || ದೊರೆ ನಿಮ್ಮ ಕರೆಸಿದ ಬರಬೇಕು ಎನ್ನಲು ಹರಿಯು ನಸುನಗುತಲಿ ಹೊರಟು ನಿಂತ | ಧರೆಗುಂಗುಷ್ಠವನೂರಲು ರಾಜರು ಉರುಳಿಬಿದ್ದರು ಶ್ರೀಪಾದದ ಮೇಲೆ || ಕರುಣಾಕರ ಶ್ರೀಹರಿ ತನ್ನ ಭಕ್ತರ ನಿರುತದಿ ಪೊರೆವನು ಆಯತದಿ | ಸಿರಿಯರಸ ನಮ್ಮ ಪುರಂದರವಿಟ್ಠಲನ ಶರಣರೆ ಧನ್ಯರು ಧರೆಯೊಳಗೊ ||

Thoughts & Reflections

0

No reflections shared yet. Be the first to share your thoughts!

Share your thought