Bhasaka
← Back to home

ರಂಗನಾಯಕ ರಾಜೀವ ಲೋಚನ

Author: ಪುರಂದರದಾಸCategory: ಶ್ರೀಕೃಷ್ಣ
ರಂಗನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತು ಏಳೆನ್ನುತ ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ದೆ ಸಾಕೆನ್ನುತ || ಪ || ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದು ಅಕ್ಷಿ ತೆರೆದು ಬೇಗ ಈಕ್ಷಿಸೆಂದು ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ ಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ || ೧ || ಸನಕ ಸನಂದನ ಸನತ್ಸುಜಾತರು ಬಂದು ವಿನಯದಿಂ ಕರ ಮುಗಿದು ಓಲೈಪರು ಘನಶುನಕ ಶೌನಕ ವ್ಯಾಸವಾಲ್ಮೀಕರು ನೆನೆದು ನೆನೆದು ಕೊಂಡಾಡುವರು ಹರಿಯೇ || ೨ || ಸುರರು ಕಿನ್ನರರು ಕಿಂಪುರುಷರು ಉರಗರು ಪರಿಪರಿಯಲಿ ನಿನ್ನ ಸ್ಮರಿಸುವರು ಅರುಣನು ಬಂದು ಉದಯಾಚಲದಲಿ ನಿಂದು ಕಿರಣ ತೋರುವನು ಭಾಸ್ಕರನು ಶ್ರೀಹರಿಯೆ || ೩ || ಪದುಮನಾಭನೆ ನಿನ್ನ ನಾಮಾಮೃತವನ್ನು ಪದುಮಾಕ್ಷಿಯರು ತಮ್ಮ ಗೃಹದೊಳಗೆ ಉದಯದೊಳೆದ್ದು ಸವಿದಾಡುತ್ತ ಪಾಡುತ್ತ ದಧಿಯ ಕಡೆವರೇಳೋ ಮಧುಸೂದನ ಕೃಷ್ಣ || ೪ || ಮುರಮಥನನೆ ನಿನ್ನ ಚರಣದ ಸೇವೆಯ ಕರುಣಿಸಬೇಕೆಂದು ತರುಣಿಯರು ಪರಿಪರಿಯಿಂದಲೆ ಸ್ಮರಿಸಿ ಹಾರೈಪರು ಪುರಂದರವಿಠಲ ನೀನೇಳೋ ಶ್ರೀಹರಿಯೆ || ೫ ||

Thoughts & Reflections

0

No reflections shared yet. Be the first to share your thoughts!

Share your thought