Bhasaka
← Back to home

ಗಜೇಂದ್ರ ಮೋಕ್ಷ

Author: ವಾದಿರಾಜಸ್ವಾಮಿCategory: ಶ್ರೀಕೃಷ್ಣ
ಶ್ರೀನಾಥ ಪಾರ್ವತಿಯ ನಾಥ ಶರಣೆಂಬೆ | ವಾಣಿ ಭಾರತಿಯ ಗಜಮುಖನ ಬಲಗೊಂಬೆ || ನಾನು ಬಲ್ಲಷ್ಟು ಪೇಳುವೆನು ಈ ಕಥೆಯ | ಶ್ರೀನಾಥ ಗಜರಾಜಗೊಲಿದ ಸಂಗತಿಯ || ೧ || ಭಪನ್ನ ದೇಶ ದೇಶದ ರಾಯರೊಳಗೆ | ಉತ್ತಮದ ದೇಶ ಗೌಳಾದೇಶದಲ್ಲಿ || ವಿಷ್ಣು ಭಕ್ತರೊಳು ಇಂದ್ರದ್ಯುಮ್ನ ನೃಪನು | ಮತ್ತೆ ಭೂಸುರರ ಪಾಲಿಸುತ್ತಿದ್ದ ತಾನು || ೨ || ಚಿತ್ತದಲ್ಲಿ ನರಹರಿಯ ನೆನೆದು ಚಿಂತಿಸುತ | ಪುತ್ರಮಿತ್ರಾದಿ ಬಂಧುಗಳ ವರ್ಜಿಸುತ || ಧ್ಯಾನದಲಿ ನರಹರಿಯ ನೆನೆದು ಚಿಂತಿಸುತ | ಆನೆಕುದುರೆಯ ರಾಜ್ಯಗಳನು ತ್ಯಜಿಸುತ್ತ || ೩ || ಸರ್ಪಶಯನನ ಧ್ಯಾನದಲ್ಲಿದ್ದ ತಾನು | ಮತ್ತೆ ತ್ರಿಕೊಟಪರ್ವತಕಾಗಿ ಬಂದು || ನಾಗಶಯನನ ಧ್ಯಾನದಲ್ಲಿದ್ದ ತಾನು | ಮೇರುಮಂದರದ ಸಮೀಪಕ್ಕೆ ಬಂದು ||೪ || ಸಿದ್ದ ಕಿನ್ನರರು ಗಂಧರ್ವರಿಗೆ ಸ್ಥಾನ | ಎದ್ದೆದ್ದು ಕುಣಿವ ಮೃಗಖಗಗಳ ಸೀಮ || ಎತ್ತ ನೋಡಲು ನಾಲ್ಕು ದೇಶ ವಿಸ್ತೀರ್ಣ | ಸುತ್ತ ಸುವರ್ಣಮಯ ವಸ್ತುಗಳ ಧಾಮ || ೫ || ಹಲವು ನದಿ ಹಲವು ಕೊಳ ಹಲವು ಸರೋವರದಿ | ಹಲವು ಪರಿ ಪುಷ್ಪಗಳು ಮೆರೆವ ಅಳಿಕುಲದಿ || ಚೆಲುವ ಗಂಧರ್ವ ಕಿನ್ನರಿಯರ ಸ್ಥಾನ | ಕುಣಿವ ನವಿಲುಗಳ ಗಿಳಿಕೋಗಿಲೆಯ ಗಾನ || ೬ || ಬಂದು ನದಿಯಲ್ಲಿ ಸ್ನಾನವನ ಮಾಡಿದನು | ಚಂದ ದಿಕ್ಕಿದನು ದ್ವಾದಶ ನಾಮಗಳನು || ಸಂಧ್ಯಾವಂದನೆ ಮಾಡಿ ಪದ್ಮ ಆಸನದಿ | ಇಂದಿರಾಪತಿಯ ಮನದೊಳಗಿರಿಸಿ ತಾನು || ೭ || ಅಂದಾಗ ಆಯೆಡೆಗೆ ಅಗಸ್ತ್ಯಮುನಿ ಬಂದ | ನಿಂದಿರ್ದು ವಂದನೆಯ ಮಾಡಲಿಲ್ಲೆಂದ || ಎಂದೆನುತ ಮನದಿ ಕೋಪಿಸುತ ಶಾಪಿಸಿದ | ಕುಂಜರದ ರೂಪಾಗಿ ಜನಿಸು ಹೋಗೆಂದ || ೮ || ತಪ್ಪುಂಟು ಮಹರ್ಷಿಯೆ ಕೇಳು ಬಿನ್ನಪವ | ವಿಶ್ಯಾಪ ಎಂದಿಗಾಗುವುದೆನುತ ಪೇಳು || ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ | ವಿಶ್ಯಾಪ ಅಂದಿಗಾಗುವುದೆಂದು ಪೇಳೆ || ವಿಷ್ಣು ಚಕ್ರವು ಬಂದು ನಿನ್ನ ಸೋಕುತಲೆ | ವಿಶ್ಯಾಪ ಅಂದಿಗಾಗುವುದೆಂದು ಪೇಳೆ || ೯ || ಜ್ಞಾನವಡಗಿದವು ಅಜ್ಞಾನ ವಾವರಿಸೆ | ಸೂರ್ಯ ಮುಳುಗಿದನು ಕತ್ತಲೆ ಮುಸುಕಂತೆ || ಧ್ಯಾನಿಸುತ ಹಿಂದುಮುಂದಾಗ ಕುಳಿತಿರಲು | ಅನೆಯಾದನು ನೃಪನು ಆ ಕ್ಷಣದಿ ತಾನು || ೧೦ || ಮೇರುಪರ್ವತ ಕದಲಿ ಇಳಿದು ಬರುವಂತೆ | ಮೇಲುಮದ ಕೀಳು ಮದ ಸುರಿಯೆ ಕುಂಭದಲಿ | ಕಾಡಾನೆ ಕರಿಯಾನೆ ಮರಿಯಾನೆ ಸಹಿತ | ಕೂಡಿಕೊಂಡೆಲ್ಲ ಒಂದಾಗಿ ಸಂಭ್ರಮಿಸಿ || ಕಾಡಾನೆಯಾಳಗ್ಹಲವು ಮಕ್ಕಳನೆ ಪಡೆದು | ಕಾನನದೊಳಗೆ ಸಂಚರಿಸುತ್ತಿದ್ದ ತಾನು || ೧೧ || ಘಟ್ಟ ಬೆಟ್ಟಗಳ ಹತ್ತುತಲೆ ಇಳಿಯುತಲೆ | ಹಿಟ್ಟು ಹಿಟ್ಟಾಗಿ ಕಲ್ಮರವ ತುಳಿಯುತಲೆ || ದಟ್ಟ ಡವಿಯೊಳಗೆ ಸಂಚರವ ಮಾಡುತಲೆ | ಬತ್ತಿದವು ಕೆರೆತೊರೆಯು ಬೇಸಗೆಯು ಬರಲು || ೧೨ || ಕಂಡಕಂಡಲ್ಲಿ ಏರುತಲಿ ಇಳಿಯುತಲಿ | ತುಂಡುತುಂಡಾಗಿ ಗಿಡಮರವ ಮುರಿಯುತಲಿ || ತಂಡತಂಡದಲ್ಲಿದ ತನ್ನ ಸತಿ ಸುತರು | ಬೆಂಡಾಗಿ ಹಸಿವು ತೃಷೆಯಿಂದ ಬಳಲಿದರು || ೧೩ || ಬಾಳೆ ಕಿತ್ತಳೆನಿಂಬೆ ಚೂತ ಮಾದಲವು ದಾಳಿಂಬ ದ್ರಾಕ್ಷಿಖರ್ಜೂರ ಪೇರಳೆಯು || ಮೇಲಾದ ಫಲಪುಷ್ಪದಿಂದ ಶೋಭಿಸಲು | ತಾವರೆ ಕೊಳವೊಂದ ಕಂಡ ಗಜರಾಜ || ೧೪ || ನವರತ್ನ ಮುತ್ತು ಮಾಣಿಕ್ಯ ಸೋಪಾನ | ಕೊಳದ ಸುತ್ತಲು ಮುತ್ತಿ ಚಕ್ರವಾಕಗಳು || ನಲಿಯುತಿವೆ ಹಲುವ ಹಕ್ಕಿಗಳು ಹಂಸಗಳು | ಪರಿಮಳಿಸುವಾ ಕೊಳವೆ ಹೊಕ್ಕ ಗಜರಾಜ ||೧೫ || ಹೊಡೆಯುತಲಿ ಬಡೆಯುತಲಿ ಕುಡಿಯುತಲಿ ನೀರ | ಮಡುವಿನಲ್ಲಿ ಚೆಲ್ಲುತಲಿ ನಲಿದುವೊಂದಾಗಿ || ಕಾಡಾನೆ ಕರಿಯಾನೆ ಮರಿಯಾನೆ ಸಹಿತ | ಕೂಡಿದೋಂಡಿರಲಿಂತು ಸಮ್ಭ್ರದುದಿ ಜಲದಿ || ೧೬ || ಮುನಿಯು ಶಾಪದಲೊಂದು ಮಕರಿ ಮಡುವಿನೊಳು | ಹಲವುಕಾಲದಿ ತಪಿಸಿ ಜೀವಿಸುತ್ತಿರಲು || ಮದಗಜವು ಪೊಕ್ಕು ಮಡುವನೆ ಕಲುಕು ತಿರಲು ತಡೆಯದಾ ಮಕರಿ ಹಿಡಿಯಿತು ಕರಿಯ ಕಾಲು || ೧೭ || ಅತ್ತಿತ್ತ ನೋಡಿದನು ಸುತ್ತ ನೋಡಿದನು | ಎತ್ತ ನೋಡಿದರೂ ಬಿಡದು ಆ ಮಕರಿ ಕಾಲು || ಎಳೆದೊಮ್ಮೆ ನೋಡಿದನು ಸೆಳದೊಮ್ಮೆ ನೋಡಿದನು | ಹೇಗೆ ನೋಡಿದರು ಬಿಡದು ಆ ಮಕರಿ ಕಾಲು || ೧೮ || ತನ್ನ ಸತಿ ಸುತರೆಲ್ಲ ಸೆಳದರೊಂದಾಗಿ | ತಮ್ಮ ಕೈಲಾಗದೆಂದೆನುತ ತಿರುಗಿದರು | ಎನ್ನ ಪುಣ್ಯದ ಫಲವು ಹೋಗಿ ನೀವೆಂದ | ದುಮ್ಮಾನದಿಂದ ದೊರದಲ್ಲಿದ್ದರವರು || ೧೯ || ಕಚ್ಚುತಲಿ ಸೆಳೆಯುತಲಿ ಆ ಮಕರಿ ಕಾಲು | ರಕ್ತಮಯವಾಗಿ ತುಂಬಿತು ಕೊಳದ ನೀರು | ಅಕ್ಕಟಾ ಎನಗಿನ್ನು ಗತಿಯಾರು ಎನುತ ದಿಕ್ಕುಗೆಟ್ಟಂತೆ ಮೊರೆಯಿಟ್ಟ ಗಜರಾಜ || ೨೦ || ಅಚ್ಯುತಾನಂತ ಶ್ರೀಹರಿಯೆನ್ನ ಕಾಯೋ | ಸಚ್ಚಿದಾನಂದ ಸರ್ವೇಶ್ವರನೆ ಕಾಯೋ || ಭಕ್ತವತ್ಸಲನೆ ಭವಭಂಜನನೆ ಕಾಯೋ | ಕಷ್ಟಪಡುತೇನೆ ಕರುಣಿಸಿ ಕರುಣಿ ಕಾಯೋ || ೨೧ || ಎಂಭತ್ತು ನಾಲ್ಕು ಲಕ್ಷ ಜೀವರಾಶಿಗಳಾ | ಇಂಬಿಟ್ಟ್ ಸಲಹೋ ಜಗದೀಶ್ವರನ ಕಾ ಯೋ | ಜಂಗಮ ಸ್ಥಾವರಗದೊಳಗೆ ಪರಿಪೂರ್ಣ | ಎಂಬಂಥ ನೀ ಎನ್ನ ಬಂಧನ ಬಿಡಿಸೊ || ೨೨ || ಈರೇಳು ಭುವನವನು ಹೃದಯದೊಳಗಿಟ್ಟೆ | ಕಾದುಕೋ ಎಂದು ಗಜರಾಜ ವೊರೆಯಿಟ್ಟ | ಅಹಾರ ನಿದ್ರೆ ಇಲ್ಲದೆ ಸಾವಿರ ವರುಷ| ಬಹಳ ನೊದೆನೆ ಸ್ವಾಮಿ ಕಾಯೋ ಬಾಯೆಂದ || ೨೩ || ವೇದಗಳ ಕದ್ದು ಕೊಂಡೊಯ್ದ ದಾನವನ | ಸಾಧಿಸಿದೆ ಭೇಧಿಸಿದೆ ಅವನ ಛೇದಿಸಿದೆ || ಆದಿ ನಿಗಮವ ತಂದು ಕಮಲಜನಿಗಿತ್ತೆ | ವೇದಾಂತವೇದ್ಯ ಮತ್ಸ್ಯಾವತಾರ ಶರಣು || ೨೪ || ಸುರಾಸುರರು ಪಾಲ್ಗಡಲ ಮಥಿಸುತಿರಲು | ಮರವೈರಿ ಹಾಸಿಗೆಯ ಹುರಿ ಮಾಡಿಕೊಂಡು | ಭರದಿ ಮಂದರಗಿರಿಯು ಇಳಿಯುತಿರೆ ಬಂದು | ಗಿರಿಯನೆತ್ತಿದ ಕೂರ್ಮ ಹರಿ ನಿನಗೆ ಶರನು || ೨೫ || ಸುರುಳಿ ಸುತ್ತಿದ ಭೂಮಿ ದಾಡೆಯಲಿ ತಂದೆ | ದುರುಳ ಹಿರಣ್ಯಾಕ್ಷನನು ಬೇಗದಲಿ ಕೊಂದೆ | ಧರಣಿದೇವಿಯನು ಸದಮಲದೊಳು ಗೆದ್ದೆ | ವರಹಾವತಾರ ಶ್ರೀಹರಿ ನಿನಗೆ ಶರಣು || ೨೬ || ಬಾಲಕನು ಕರೆಯಲಿಕೆ ಕಂಬದಲಿ ಬಂದೆ | ಸೀಳಿ ರಕ್ಕಸನ ಕರುಳಿನ ಮಾಲೆ ಹಾಕಿದೆ || ಶೀಲ ಪ್ರಲ್ಹಾದನಿಗೆ ಅಭಯವನು ಇತ್ತೆ | ಶ್ರೀಲಕ್ಷ್ಮಿಪೊಡನಿದ್ದ ನರಸಿಂಹ ಶರನು || ೨೭ || ಬಲಿಯ ದಾನವ ಬೇಡಿ ಬ್ರಹ್ಮಚಾರಿಯಾಗಿ | ನೆಲವನೆಲ್ಲವ ಮೂರು ಅಡಿಮಾಡಿ ಅಳೆದೆ || ಅಲೆದ ಪಾದದಲಿ ಭಾಗಿರಥಿಯ ತಂದೆ | ಚೆಲುವೆ ವಾಮನಮೂರ್ತಿ ತ್ರಿವಿಕ್ರಮನೆ ಶರನು || ೨೮ || ದುಷ್ಟ ಕ್ಷತ್ರಿಯ ನೃಪರ ಕುಲವ ಸಂಹರಿಸಿ | ರಕ್ತದಲಿ ಸ್ನಾನತರ್ಪಣವ ನೀ ಕೋಟ್ಟೆ ಮತ್ತೆ ವೇದಾಂತ ಶಾಸ್ತ್ರಗಳ ನೆರೆ ಓದಿ | ವಿಪ್ರ ಭಾರ್ಗವರಾಮ ಹರಿ ನಿನಗೆ ಶರಣು || ೨೯ || ಹರನ ಬಿಲ್ಲನೆ ಮುರಿದು ಧರಣಿಜೆಯ ತಂದೆ | ದುರುಳ ರಾವಣಶಿರಗಳ ಹತ್ತು ತರಿದೆ | ವರ ವಿಭೀಷಣಗವನ ರಾಜ್ಯ ಗಳನಿತ್ತೆ || ಶರಣರಕ್ಷಕ ಸೀತಾಪತಿ ರಾಮ ಶರಣು || ೩೦ || ಮಧುರೆಯಲಿ ಹುಟ್ಟಿ ಗೋಕುಲದಲಿ ಬೆಳೆದೆ | ತರಳತನದಲಿ ಹಾಲು ಬೆಣ್ಣೆಗಳ ಮೆದ್ದೆ | ತರುವ ಕಾಯುತ ಕೊಂದೆ ಹಲವು ರಕ್ಕಸರ | ಬಲರಾಮಕೃಷ್ಣ ಗೋಪಾಲಕನೆ ಶರಣು || ೩೧ || ತ್ರಿಪುರಸತಿಯರ ವ್ರತ ಅಪಹರಿಸಿದವನೆ | ಪೃಥವಿಯುಳು ಅಶ್ವತ್ಥನಾಗಿ ಮೆರೆದವನೆ || ಬಿಸಿಗಣ್ಣ ಹರಗೆ ಅಂಬಾಗಿ ನಿಂತವನೆ || ಪಶುಪತಿಪ್ರೀಯ ಬೌದ್ಧ ಅವತಾರ ಶರಣು || ೩೨ || ವರ್ಣಾಶ್ರಮಗಳೆಲ್ಲ ಒಂದಾಗಿ ಇರಲು | ಬಿನ್ನಾಣದಿಂದ ತುರುಗವನೇರಿಕೊಂಡು || ಬನ್ನ ಪಡಿಸುತ ಹಲವು ಪಾತಕರ ಕೊಂದೆ | ಬ್ರಹ್ಮಸ್ವರೂಪ ಕಲ್ಕ್ಯವತಾರ ಶರಣು || ೩೩ || ಅರಿಯದಂತಿರದೆ ಅಚ್ಯುತ ರಕ್ಶಿಸೆನ್ನ | ಮರೆಯೆ ದೆಂದಿರದೆ ಮಾಧವ ರಕ್ಷಿಸೆನ್ನ || ಕೆಳೆನೆಂದೆನದೆ ಕೇಶವ ರಕ್ಷಿಸೆನ್ನ | ಕಾಣಿನೆಂದೆನದೆ ಕರುಣಿಸಿ ರಕ್ಷಿಸೆನ್ನ || ೩೪ || ಕಾಯಕಂಜದ ಪ್ರಾಣ ಹೋಗುತಿದೆ ಮುನ್ನ | ಯಾವಾಗ ಹರಿಬಂದು ಕಾಯ್ವನೋ ಎನ್ನ | ಚೇರಿದನು ಕೂಗಿ ಮೊರೆಯಿಟ್ಟ ಗಜರಾಜ | ದಾನವಾಂತಕನು ಕಿವಿಗೋಟ್ಟು ಕೇಳಿದನು || ೩೫ || ಕ್ಷಿರಾಬ್ಧಿಯಲಿ ವೈಕುಂಠ ನೆಲಸಿದ್ಧ | ಶೇಷನಾ ಹಾಸಿಗೆಯ ಮೇಲೆ ಕುಳ್ಳಿರ್ದ || ಶ್ರೀಲಕ್ಷ್ಮೀ ಸಮ್ಮೇಳನದಿಂದ ಒಪ್ಪಿರಲು | ಆಲಯಿಸಿ ಕೇಳಿದನೆ ಅಜನನೆ ಅಜನ ಪೆತ್ತವನು || ೩೬ || ಶಂಕಚಕ್ರಗಳಿಲ್ಲವೆಂದು ಶಂಕಿಸದೇ | ಬಿಂಕದಿಂ ಗರುಡನ್ನ ಪಗಲೇರಿಸಿಕೊಳದೆ || ಪಂಕಜಾಕ್ಷಿಯ ಕೂಡ ತಾನು ಉಸಿರಿಸದೆ || ಪಂಕಜನಾಭ ಬಂದನು ಕೊಳದ ಕಡೆಗೆ || ೩೭ || ಸಜ್ಜೆ ಉಪ್ಪರಿಗೆಯಿಂದಿಳಿದು ಬರುವಾಗ | ವಜ್ರಕುಂಡಲ ಕದಪು ಹಾರಗಳು ಹೊಳೆಯೆ | ಹೊದ್ದ ಪೀತಾಂಬರವು ನೆಲಕೆ ಅಲೆಯುತಲಿ | ಎದ್ದು ಬಂದನು ದಯಾಸಮುದ್ರ ಬಂದಂತೆ || ೩೮ || ಸಿಂಧುಸುತೆ ಪತಿಯೆಲ್ಲಿ ಪೋದನೋ ಎನುತ | ಮಂದಗಮನೆಯು ಬರಲು ಪುರವೆಲ್ಲ ತೆರಳೆ || ವಂದಿಸದ ಗರುಡ ಗಂಧರ್ವರೊಗ್ಗಿನಲಿ | ಅಂದಾಗ ಶಖಚಕ್ರವು ಕೂಡಿ ಬರಲು || ೩೯ || ಹರಿಯು ಗರುಡನನೇರಿ ಕರಿಯತ್ತ ಬರಲು | ಹರ ಪಾರ್ವತಿಯರು ನಂದಿಯನರಿಕೊಳುತ || ಶಿರವ ಮೇಲಿನ ಗಂಗೆ ತುಳುಕಾಡುತಿರಲು | ಹರ ಬಂದ ಕೈಲಾಸಪುರದಿಂದ ಇಳಿದು || ೪೦ || ತೊಡೆಯ ಮೇಲಿನ ಗೌರಿದೇವಿಯಳ ಸಹಿತ | ಮುಡಿಯ ಮೇಲಿನ ಗಂಗೆ ತುಳುಕಾಡು ತಿರಲು | ಹರಪಾರ್ವ ತಿದೇವಿ ವೃಷಭವನ್ನೇರಿ | ಹರ ಬಂದ ಕೈಲಾಸಪುರದಿಂದ ಇಳಿದು || ೪೧ || ದೇವರ್ಷಿ ಬ್ರಹ್ಮರ್ಷಿ ರಾಜರ್ಷಿ ಸಹಿತ | ದೇವಪುತ್ರಾದಿ ಸನಕಾದಿಗಳು ಕೂಡಿ || ಸುಮ್ಮನೇ ನಾರದನಂದು ನಡೆತಂದ | ಧರ್ಮ ಸ್ವರೂಪವೆಲ್ಲಾ ನೆರೆದರಂದು || ೪೨ || ಬಂದ ಚಕ್ರವನು ಕರಕಮಲದಲಿ ತೆಗೆದು | ಸಂಧಿಸಿಟ್ಟನು ಮಕರಿ ಹಲ್ಲು ಮುರಿವಂತೆ | ಅಂದಾಗ ಅವನ ಶಾಪ ವಿಶ್ಯಾಪವಾಗಿ | ಗಂಧರ್ವ ರೂಪಿನಲಿ ನಿಂತಿತಾ ಮಕರಿ || ೪೩ || ಹರಿಯ ಸಂದರ್ಶನವು ಮದಗಜಕೆ ಸೋಕುತಲೆ | ಒದಗಿದವು ಶಂಖ ಚಕ್ರ ನಾಲ್ಕು ಕೈಗಳಲಿ | ಉತ್ತ ಪಿತಾಂಬರವು ಕಿರೀಟ ಕುಂಡಲವು | ಎಳೆತುಳಸಿಮಾಲೆಗಳು ಕೊರಳೊಳೊಪ್ಪಿದವು || ೪೪ || ಜಯಜಯ ಜಗನ್ನಾಥ ಜಯ ವಿಶ್ವಮೂರ್ತಿ | ಜಯ ಜಯ ಜನಾರ್ಧನ ಜಯ ವಿಶ್ವರೂಪ | ಜಯತು ಸರ್ವೋತ್ತಮನೆ ಕ್ಷಿರಾಬ್ಧಿಶಯನ | ಜಯವೆಂದು ಪದಗಳಿಗೆ ಬಂದು ಎರಗಿದನು || ೪೫ || ಇಂದಿವನ ಭಾಗ್ಯವನು ನೋಡುವರು ಕೆಲರು | ಇಂದಿರಾ ಪತಿಯ ಕೊಂಡಾಡುವರು ಕೆಲರು | ಮಂದಾರ ಹೊಮಳೆಯ ಕರೆಯುತ್ತ ಸುರರಂ | ದುಂದುಭಿ ವಾದ್ಯಗಳ ವೈಭವ ಗಳಿರಲು || ೪೬ || ಸಿರಿಸಹಿತ ಹರಿಯು ಗರುಡ ನೇರಿಕೊಂಡು ಕರಿರಾಜನೊಡನೆ ವೈಕುಂಠಕ್ಕೆ ಬರಲು || ಹರಪಾರ್ವತಿಯರು ಕೈಲಾಸಕೆ ತೆರಳೆ | ತರತರದ ವಾಹನಾದಿ ಸುರರು ತೆರಳಿದರು || ೪೭ || ಹೊತ್ತಾರೆ ಎದ್ದು ಈ ಕಥೆ ಹೇಳಿ ಕೇಳಿದವರಿಗೆ | ದುಃಸ್ವಪ್ನ ದುರ್ಬುಧಿ ದುರ್ವ್ಯಸನ ಕಳೆವದು || ಸರ್ಪಾರಿ ವಾಹನನ ಧ್ಯಾನ ದೊಳಗಿರಲು | ಸತ್ಸಂಗ ಸಾಯುಜ್ಯ ಪದವಿ ದೊರಕುಪುದು || ೪೮ || ಹರಿಯ ನೆನೆ ಹರಿಯ ನೆನೆ ಹರಿಯ ನೆನೆ ಮನವೆ ಮರೆಯದಲೆ ಮಾಧವನ ನೆನೆ ಕಂಡ್ಯ ಮನವೆ | ಹರಿಯ ನೆನೆದವರಿಗೆ ಪರಮ ಪದವಿಯು ಉಂಟು | ಕರಿರಾಜವರದನ್ನ ಶರಣೆಂದು ಭಜಿಸು || ೪೯ || ಜಯತು ದ್ರುವರಾಯನಿಗೆ ವರವಿತ್ತ ದೇವ | ಜಯತು ಪ್ರಲ್ಹಾದಭಯವಿತ್ತ ದೇವ | ಜಯತು ದ್ರೌಪದಿಯಭಿಮಾನ ಕಾಯ್ದು ದೇವಾ ಜಯತು ಜಯ ಹಯವದನ ಶ್ರೀವಾಸುದೇವ || ೫೦ ||

Thoughts & Reflections

0

No reflections shared yet. Be the first to share your thoughts!

Share your thought