Bhasaka
← Back to home

ಸರ್ವಜ್ಞನ ತ್ರಿಪದಿಗಳು

Author: ಸರ್ವಜ್ಞCategory: ವಚನಗಳು
ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು ಆಡಿ ಕೊಡುವವನು ಮಧ್ಯಮನು – ಅಧಮ ತಾನಾಡಿಯೂ ಕೊಡದವನು ಸರ್ವಜ್ಞ|| ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ ದಾಟವೇ ಕೆಡುಗು ಸರ್ವಜ್ಞ|| ಯಾತರ ಹೂವಾದರು । ನಾತರೆ ಸಾಲದೆ ಜಾತಿ- ವಿಜಾತಿಯೆನಬೇಡ – ಶಿವನೊಲಿ ದಾತನೇ ಜಾತಿ ಸರ್ವಜ್ಞ|| ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ? ಜಾತಿವಿಜಾತಿಯೆನಬೇಡ ದೇವನೊಲಿದಾತನೇ ಜಾತ ಸರ್ವಜ್ಞ|| ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆ ಅನ್ನವಿರುವನಕ ಪ್ರಾಣವು – ಜಗದೊಳ ಗನ್ನವೇ ದೈವ ಸರ್ವಜ್ಞ|| ಕೊಟ್ಟಿದ್ದು ತನಗೆ , ಬಚ್ಚಿಟ್ಟಿದ್ದು ಪರರಿಗೆ ಕೊಟ್ಟಿದ್ದು ಕೆಟ್ಟಿತೆನಬೇಡ , ಮುಂದೆ ಕಟ್ಟಿಹುದು ಬುತ್ತಿ , ಸರ್ವಜ್ಞ|| ಸಾಲವನು ತರುವಾಗ । ಹಾಲು – ಹಣ್ಣುಂಬಂತೆ । ಸಾಲಿಗನು ಬಂದು ಎಳೆದಾಗ ಕಿಬ್ಬದಿಯ । ಕೀಲು ಮುರಿದಂತೆ ಸರ್ವಜ್ಞ|| ವಿದ್ಯೆ ಕಲಿಸದ ತಂದೆ । ಬುದ್ಧಿ ಹೇಳದ ಗುರುವು । ಬಿದ್ದಿರಲು ಬಂದ ನೋಡದಾ ತಾಯಿಯೂ । ಶುದ್ಧ ವೈರಿಗಳು ಸರ್ವಜ್ಞ|| ಮೂರ್ಖಂಗೆ ಬುದ್ಧಿಯನು । ನೂರ್ಕಾಲ ಹೇಳಿದರೆ ಬೋರ್ಕಲ್ಲ ಮೇಲೆ ಮಳಿಗರಿದರಾ ಕಲ್ಲು । ನೀರ್ಕೊಳ್ಳಬಹುದೆ ಸರ್ವಜ್ಞ|| ಕತ್ತೆಂಗ ಕೋಡಿಲ್ಲ । ತೊತ್ತಿಗಂ ಗುಣವಿಲ್ಲ । ಹತ್ತಿಯಾ ಹೊಲಕ ಗಿಳಿಯಿಲ್ಲ ಡೊಂಬನಿಗೆ । ವೃತ್ತಿಯೇ ಇಲ್ಲ ಸರ್ವಜ್ಞ|| ಉಣ ಬಂದ ಲಿಂಗಕ್ಕೆ । ಉಣಲ್ಲಿಕ್ಕದಂತರಿಸಿ ಉಣದಿರ್ಪ ಲಿಂಗಕ್ಕುಣ ಬಡಿಸಿ – ಕೈಮುಗಿವ ಬಣಗುಗಳ ನೋಡ ಸರ್ವಜ್ಞ|| ಭೂತೇಶಗೆರಗುವನು ಜಾತಿ ಮಾದಿಗನಲ್ಲ ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ ದಾತ ಮಾದಿಗನು ಸರ್ವಜ್ಞ|| ಜಂಗಮನು ಭಕ್ತತಾ । ಲಿಂಗದಂತಿರಬೇಕು । ಭಂಸುತ ಪರರ ನಳಿವ ಜಂಗಮನೊಂದು । ಮಂಗನೆಂದರಿಗು ಸರ್ವಜ್ಞ|| ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು ನಂಜಿನಂತಕ್ಕು ಸರ್ವಜ್ಞ|| ಮೇರುವಿಂಗೆಣೆಯಿಲ್ಲ । ಧಾರುಣಿಕೆ ಸರಿಯಿಲ್ಲ । ತಾರಕೆನಿಗಿಂತ ಹಿತರಿಲ್ಲ, ದೈವತಾ । ಬೇರೊಬ್ಬನಿಲ್ಲ ಸರ್ವಜ್ಞ|| ಸೋರುವ ಮನೆ ಹೊಲ್ಲ। ಜಾರೆ ಸತಿಯಿರಹೊಲ್ಲ। ಹೋರುವ ಸೊಸೆಯ ನೆರೆ ಹೊಲ್ಲ, ಕನ್ನದ । ಸೂರೆಯೇ ಹೊಲ್ಲ ಸರ್ವಜ್ಞ|| ಏನು ಮನ್ನಿಸದಿರಲು । ಸೀನು ಮನ್ನಿಸಬೇಕು । ಸೀನು ಮನ್ನಿಸದೆ ಹೋಗಿಹರೆ ಹೋದಲ್ಲಿ। ಹಾನಿಯೇ ಬಕ್ಕು ಸರ್ವಜ್ಞ|| ಎಣಿಸುತಿರ್ಪುದು ಬೆರಳು ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ ಶುನಕನಂತಕ್ಕು ಸರ್ವಜ್ಞ|| ಕತ್ತೆಯರಚಿದಡಲ್ಲಿ। ತೊತ್ತು ಹಾಡಿದಡಲ್ಲಿ। ಮತ್ತೆ ಕುಲರಸಿಕನಿರುವಲ್ಲಿ ಕಡು ನಗೆಯ। ಹುತ್ತ ಕಾಣಯ್ಯ ಸರ್ವಜ್ಞ|| ಹಲವು ಮಕ್ಕಳ ತಂದೆ । ತಲೆಯಲ್ಲಿ ಜುಟ್ಟವದೆ । ಸತಿಗಳಿಗೆ ಜಾವವರಿವವನ ಹೆಂಡತಿಗೆ ಮೊಲೆಯಿಲ್ಲ ನೋಡಾ ಸರ್ವಜ್ಞ|| ಲಿಂಗವ ಪೂಜಿಸುವಾತ | ಜಂಗಮಕೆ ನೀಡದೊಡೆ ಲಿಂಗದ ಕ್ಷೋಭೆ ಘನವಕ್ಕು – ಮಹಲಿಂಗ ಹಿಂಗುವುದು ಅವನ ಸರ್ವಜ್ಞ|| ಕುಲವನ್ನು ಕೆಡಿಸುವದು ಛಲವನ್ನು ಬಿಡಿಸುವದು ಹೊಲೆಯನಾ ಮನೆಯ ಹೊಗಿಸುವದು ಕೂಳಿನಾ ಬಲವ ನೋಡೆಂದ ಸರ್ವಜ್ಞ|| ನೆತ್ತಿಯಲಿ ಉಂಬುವದು । ಸುತ್ತಲೂ ಸುರಿಸುವುದು। ಎತ್ತಿದರೆ ಎರಡು ಹೋಳಹುದು, ಕವಿಗಳಿದ। ಕುತ್ತರವ ಪೇಳಿ ಸರ್ವಜ್ಞ|| ಸೀತಧಾತುಗಳುಂಟು । ಜಾತಿಹವು ಕುಕ್ಷಿಗಳು । ಪಾತಕರು ಮರದಿ ತಿರಿದುಂಬ ನಾಡಿಗೆ । ಏತಕ್ಕೆ ಬಹರು ಸರ್ವಜ್ಞ|| ಕನಕದಿಂ ಹಿರಿದಿಲ್ಲ। ದಿನಪನಿಂ ಬೆಳಗಿಲ್ಲ। ಬೆನಕನಿಂದಧಿಕ ಗಣವಿಲ್ಲಪರದೈವ । ತ್ರಿಣಯನಿಂದಿಲ್ಲ ಸರ್ವಜ್ಞ|| ತನುವನ್ನು ಗುರುವಿಂಗೆ। ಮನವನು ಲಿಂಗಕ್ಕೆ। ಧನವ ಜಂಗಮಕೆ ವಂಚಿಸದ ಭಕ್ತಂಗೆ। ಅನಘ ಪದವಹುದು ಸರ್ವಜ್ಞ|| ಒಂದರೊಳಗೆಲ್ಲವು ಸಂದಿಸುವದನು ಗುರು ಚಂದದಿಂ ತೋರಿಕೊಡದಿರಲು ಶೊಷ್ಯನವ ಕೊಂದನೆಂದರಿಗು ಸರ್ವಜ್ಞ|| ಸಂದಿರ್ದ ಮಾಸವನು । ಕುಂದದಿಮ್ಮಡಿ ಮಾಡಿ । ಅಂದಿನಾ ತಿಥಿಯ ನೊಡಗೂಡಲಾ ತಾರೆ । ಮುಂದೆ ಬಂದಿಹುದು ಸರ್ವಜ್ಞ|| ಊರಿಂಗೆ ದಾರಿಯ | ನಾರು ತೋರಿದರೇನು ಸಾರಾಯಮಪ್ಪ ಮತವನರುಹಿಸುವ ಗುರು ಆರಾದೊಡೇನು ಸರ್ವಜ್ಞ|| ಕುತ್ತಿಗದು ಹರಿದಿಹುದು । ಮತ್ತೆ ಬರುತರೇಳುವದು । ಕಿತ್ತು ಬಿಸುಡಲು ನಡೆಯುವದು ಕವಿಜನರ । ಅರ್ತಿಯಿಂ ಪೇಳಿ ಸರ್ವಜ್ಞ|| ಕೆಟ್ಟಹಾಲಿಂದ ಹುಳಿ । ಯಿಟ್ಟಿರ್ದ ತಿಳಿಲೇಸು । ಕೆಟ್ಟ ಹಾರುವವನ ಬದುಕಿಂದ ಹೊಲೆಯನು । ನೆಟ್ಟನೇ ಲೇಸು ಸರ್ವಜ್ಞ|| ಕತ್ತಿಗದು ಹರಿದಿಹುದು। ಮತ್ತೆ ಬರುತೇಳುವದು। ಕಿತ್ತು ಬಿಸಾಡಲದು ನಡದು,ಕವಿಜನರು । ಅರ್ತಿಯಿಂ ಪೇಳಿ ಸರ್ವಜ್ಞ|| ನೇತ್ರಗಳು ಕಾಣಿಸವು । ಶ್ರೋತ್ರಗಳು ಕೇಳಿಸವು । ಗಾತ್ರಗಲು ಎದ್ದು ನಡೆಯುವವು ಕೂಳೊಂದು । ರಾತ್ರಿ ತಪ್ಪಿದರೆ ಸರ್ವಜ್ಞ|| ಖುಲ್ಲ ಮಾನವ ಬೇಡಿ । ಕಲ್ಲುತಾ ಕೊಡುವದೇ । ಸೊಲ್ಲರಿವ ಶಿವನ ಬೇಡಿದಡೆ ಬಯಸಿದುದು । ನೆಲ್ಲವನು ಕೊಡುವ ಸರ್ವಜ್ಞ|| ಉತ್ತೊಮ್ಮೆ ಹರಗುವುದು ಬಿತ್ತೊಮ್ಮೆ ಹರಗುವುದು ಮತ್ತೊಮ್ಮೆ ಹರಗಿ ಕಳೆದೆಗೆದು ಬೆಳೆಯೆ ತನ್ನೆತ್ತರ ಬೆಳವ ಸರ್ವಜ್ಞ|| ಆತುಮದ ಲಿಂಗವನು ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ ದಶವಿಧದ ಪಾತಕಗಳಿಲ್ಲ ಸರ್ವಜ್ಞ|| ತೆಂಗು ಬಟ್ಟಲು ನುಂಗಿ। ಮುಂಗುಲಿಯನಿಲಿನುಂಗಿ। ಗಂಗೆವಾಳುಕರ ಹರ ನುಂಗಿ ಜಗವು ಬೆಳ। ದಿಂಗಳಂತಿಕ್ಕು ಸರ್ವಜ್ಞ|| ಓಂಕಾರ ತಾನಲ್ಲ । ಹ್ರಾಂಕಾರ ಮುನ್ನಲ್ಲ ಆಂಕಾಶತಳವ ಮೀರೆಹುದು – ಹರಿಯಜರು ತಾಂ ಕಾಣರಯ್ಯ ಸರ್ವಜ್ಞ|| ತನ್ನ ತಾನರಿದವಂಗೆ ಭಿನ್ನ ಭಾವನೆಯಿಲ್ಲ ತನ್ನವರು ಇಲ್ಲ ಪರರಿಲ್ಲ, ತ್ರೈಭುವನವೇ ತನ್ನೊಳಗೆ ಇಹುದು ಸರ್ವಜ್ಞ|| ಸೊಡರು ಲಂಚವ ಕೊಂಡು । ಕೊಡುವ ದೊಪ್ಪಚಿ ಬೆಳಗ । ಪೊಡವಿಗಂ ಸೂರ್ಯ ಬೆಳಗೀವೋಲ್ಲಂಚವನು । ಹಿಡಿಯದವ ಧರ್ಮಿ ಸರ್ವಜ್ಞ|| ಒಡಲ ದಂಡಿಸಿ ಮುಕ್ತಿ। ಪಡೆವೆನೆಂಬುವನೆಗ್ಗ। ಬಡಿಗೆಯಲಿ ಹುತ್ತ ಹೊಡೆಯಲಡಗಿಹ ಸರ್ಪ। ಮಡಿದಿಹುದೆ ಹೇಳು ಸರ್ವಜ್ಞ|| ನುಡಿಸುವದಸತ್ಯವನು । ಕೆಡಿಸುವದು ಧರ್ಮವನು । ಹಿಡಿಸಿವದು ಕಟ್ಟಿ ಒಡಿಲ ತಾ ಲೋಭವಾ । ಹಡಣ ಕಾಣಯ್ಯ ಸರ್ವಜ್ಞ|| ಊರಿಗೆ ದಾರಿಯ । ನಾರು ತೋರಿದರೇನು ಸಾರಾಯಮಪ್ಪ ಮತವನರಿಹಿಸುವ ಗುರು ಆರಾದೊಡೇನು ಸರ್ವಜ್ಞ|| ಬಡವನೊಂದೊಳು ನುಡಿಯ ನುಡಿದಿಹರೆ ನಿಲ್ಲದದು । ಕೊಡೆಯನೆಳಲಾತ ನುಡಿದಿಹರೆ ನಾಯಕನ । ನುಡಿಯಂಬರೆಲ್ಲ ಸರ್ವಜ್ಞ|| ಮೀರಿ ಬೆಳೆಯಲ್ಕೆನಗೆ । ಅರಿ ಬಣ್ಣವನುಡಿಸಿ ಮೂರು ರುಚಿದೋಳು ಶಿವ – ತನ್ನನು ತೋರದೇ ಹೋದ ಸರ್ವಜ್ಞ|| ಒಬ್ಬರಿದ್ದರೆ ಸ್ವಾಂತ । ಇಬ್ಬರಲಿ ಏಕಾಂತ । ಇಬ್ಬರಿಂದೊಬ್ಬನರಿದು ಬೇರೊಬ್ಬನಿಂ । ಹಬಿ ಲೋಕಾಂತ ಸರ್ವಜ್ಞ|| ಅರೆ ಕಲ್ಲಿನ ಮೇಲೆ । ಮರವು ಹುಟ್ಟಿದ ಕಂಡೆ। ಮರದ ಮೇಲೆರಡು ಕರ ಕಂಡೆ, ವಾಸನೆಯು। ಬರುತಿಹುದ ಕಂಡೆ ಸರ್ವಜ್ಞ|| ಕತ್ತೆ ಬೂದಿಯಲಿ ಹೊರಳಿ ಮತ್ತೆ ಯತಿಯಪ್ಪುದೇ ? ತತ್ವವರಿಯದಲೆ ಭಸಿತವಿಟ್ಟವ ಶುದ್ಧ ಕತ್ತೆಯಂತೆಂದ ಸರ್ವಜ್ಞ|| ಲೀಲೆಯಿಂ ಕಣ್ಣಿಲ್ಲ । ಗಾಲಿಯಿಂ ಬಟುವಿಲ್ಲ । ವಾಲಿಯಿಂದಧಿಕ ಬಲರಿಲ್ಲ ಪರದೈವ । ಶೂಲಿಯಿಂದಿಲ್ಲ ಸರ್ವಜ್ಞ|| ಎಲುವಿಲ್ಲ ನಾಲಿಗೆಗೆ । ಬಲವಿಲ್ಲ ಬಡವಂಗೆ । ತೊಲೆ ಕಂಭವಿಲ್ಲ ಗಗನಕ್ಕೆ, ದೇವರಲಿ । ಕುಲಭೇದವಿಲ್ಲ ಸರ್ವಜ್ಞ|| ಗುರುವಿನಾ ಸೇವೆಯನು । ಹಿರಿದಾಗಿ ಮಾಡದಲೆ । ಹರಿದಾಡಿ ಮುಕ್ತಿ ಪಡೆಯುವಡೆ ಸ್ವರ್ಗ ತಾ । ಹಿರಿಯ ತವರಹುದೆ ಸರ್ವಜ್ಞ||

Thoughts & Reflections

0

No reflections shared yet. Be the first to share your thoughts!

Share your thought