Bhasaka
← Back to home

ಕೀರ್ತನೆಯ ಮಾಡಿ ಕೈವಲ್ಯ ಪಡೆವರು

Author: ಕನಕದಾಸCategory: ಶ್ರೀಕೃಷ್ಣRaaga: ಕಲ್ಯಾಣೀTaala: ಝಂಪೆತಾಳ
ಕೀರ್ತನೆಯ ಮಾಡಿ ಕೈವಲ್ಯ ಪಡೆವರು ಜನರು- ಹರಿ ||ಪ|| ಮೂರ್ತಿ ಶ್ರೀ ಚೆನ್ನಕೇಶವನ ಮನದೊಳಗಿಟ್ಟು ||ಅ|| ಹಲವು ಮಾಯಗಳಿಂದ ಹಂಬಲಿಸಿ ಕೆಡಬೇಡ ಬಲವಂತರೊಡನೆ ಹಗೆ ಮಾಡಬೇಡ ಕುಲದಲ್ಲಿ ಜನಿಸಿ ಕುಚೋದ್ಯ ಮಾಡಲುಬೇಡ ನಲಿದು ಹರಿಯ ಪೊಗಳದ ನಾಲಗೆಯು ಬೇಡ ||1|| ಮಂದಮತಿಗಳ ಕೂಡ ಮಹಕಥೆಯ ನುಡಿಬೇಡ ಯತಿಯಾದ ಮೇಲೆ ಸತಿಸುತರಾಸೆ ಬೇಡ ಹಿತ ತಪ್ಪಿ ನಡೆವಂಥ ಹೆಂಡತಿಯು ಬೇಡ ||2|| ಕೆಟ್ಟು ಹೋದವರನ್ನು ತಿರುಗಿ ಕರೆತರಬೇಡ ಮುಟ್ಟಾದ ಮೇಲೆ ಮೋಹಿಸಿ ಕೂಡಬೇಡ ಭ್ರಷ್ಟನಾಡಿದನೆಂದು ಸಿಟ್ಟಿನಲಿ ನುಡಿಬೇಡ ಕಷ್ಟದೆಸೆಯೊಳು ಧೈರ್ಯ ಬಿಟ್ಟು ಕೆಡಬೇಡ ||3|| ವಿಟಜನರ ಕೂಡಿ ವೇಶ್ಯಾವಾರ್ತೆಗಿಳಿಯಬೇಡ ಸಟೆ ಹೇಳಿ ಸಂಸಾರ ಕೆಡಿಸಬೇಡ ತುಟಿ ಮೀರ್ದ ಹಲ್ಲಂತೆ ದೂತ ಎಂದಿಗು ಬೇಡ ನಿಟಿಲನೇತ್ರನು ನಾನೆನುವ ಜಂಭ ಬೇಡ ||4|| ತೀರ್ಥ ಯಾತ್ರೆಗೆ ಪೋಗಿ ತಿರುತಿರುಗಿ ಬಳಲಿ ಕೃ ತಾರ್ಥನಾದೆನು ಎಂಬ ಘನತೆ ಬೇಡ ಪಾರ್ಥಸಾರಥಿ ಕಾಗಿನೆಲೆಯಾದಿಕೇಶವನ ಸಾರ್ಥಕದಿ ಭಜಿಸಿ ಸುಖಿಯಾಗು ಮನುಜ ||5||

Thoughts & Reflections

0

No reflections shared yet. Be the first to share your thoughts!

Share your thought