Bhasaka
← Back to home

ಮರೆಯದಿರು ಮರೆಯದಿರು ಎಲೆ ಮಾನವ- ನಿನ್ನ

Author: ಕನಕದಾಸCategory: ಇತರೆRaaga: ಮುಖಾರಿTaala: ಝಂಪೆತಾಳ
ಮರೆಯದಿರು ಮರೆಯದಿರು ಎಲೆ ಮಾನವ- ನಿನ್ನ ಸಿರಿಯ ಹವಣೇನು ಹೇಳೆಲೊ ಮಂಕು ಜೀವ ||ಪ|| ಸಿರಿಯೊಳಗೆ ಮಾಧವನೊ ಹಿರಿಯರೊಳು ಬ್ರಹ್ಮನೋ ದುರುಳ ರಾವಣನ ಸಂಪದವೊ ನಿನಗೆ ದುರಿಯೋಧನನಂತೆ ಮಕುಟವರ್ಧನನೊ- ನಿನ್ನ ಸಿರಿಯ ಹವಣೇನು ಪೇಳೆಲೊ ಮಾನವ ||1|| ಬಲುಹಿನಲಿ ವಾಲಿಯೋ ಚೆಲುವಿಕೆಗೆ ಕಾಮನೋ ಸಲುಗೆಯಲಿ ನಾರದನೊ ಹೇಳು ನೀನು ಕಲಿಗಳೊಳು ಭೀಷ್ಮ ದ್ರೋಣಾಚಾರ್ಯ ಫಲಗುಣನೊ ಕುಲದಲ್ಲಿ ವಸಿಷ್ಠನೊ ಹೇಳೆಲೊ ಮಾನವ ||2|| ತ್ಯಾಗದಲಿ ಕರ್ಣನೋ ಭೋಗದಲಿ ಸುರಪನೋ ಭಾಗ್ಯದಲಿ ದಶರಥನೊ ಹೇಳು ನೀನು ರಾಗದಲಿ ತುಂಬುರನೊ ಯೋಗದಲಿ ಸನಕನೊ ಹೀಗ್ಯಾರ ಹೋಲುವೆ ಹೇಳೆಲೊ ಮಾನವ ||3|| ಯತಿಗಳಲ್ಲಗಸ್ತ್ಯನೋ ಜೊತೆಯಲ್ಲಿ ಹನುಮನೋ ವ್ರತಕೆ ಶುಕಮುನಿಯೇನೊ ಹೇಳು ನೀನು ಶ್ರುತಿಪಾಠ ವಿಬುಧರೊಳು ಸೂತನೋ- ನಿನ್ನ ಶುಭ ಮತಿಯ ಹವಣೇನು ಹೇಳೆಲೊ ಮಾನವ ||4|| ವಿದ್ಯೆಯಲಿ ಸುರಗುರುವೊ ಬುದ್ಧಿಯಲಿ ಮನುಮುನಿಯೊ ಶ್ರದ್ಧೆಯಲಿ ನೀನಾರ ಹೋಲ್ವೆ ಹೇಳು ಸಿದ್ಧರೊಳು ನವಕೋಟಿಯೊಳೊಬ್ಬನೊ ನೀನು ಕ್ಷುದ್ರ ಮಾನವ ನಿನ್ನ ಸಿರಿಯ ಹವಣೇನು ||5|| ಗೆಲ್ಲು ಸೋಲಿನ ಮಾತು ಸಲ್ಲದೆಲವೋ ನಿನಗೆ ಎಲ್ಲವನು ಬಿಡು ಗರ್ವ ನಿನಗೇತಕೊ ಬಲ್ಲೆಯಾದರೆ ಆದಿ ಕೇಶವನ ನಾಮವನು ಸೊಲ್ಲು ಸೊಲ್ಲಿಗೆ ತುತಿಸಿ ಸುಖಿಯಾಗಿ ಬಾಳು ||6||

Thoughts & Reflections

0

No reflections shared yet. Be the first to share your thoughts!

Share your thought