Bhasaka
← Back to home

ಆರಿಗಾದರು ಪೂರ್ವಕರ್ಮ ಬಿಡದು

Author: ಕನಕದಾಸCategory: ಇತರೆRaaga: ಮುಖಾರಿTaala: ಝಂಪೆತಾಳ
ಆರಿಗಾದರು ಪೂರ್ವಕರ್ಮ ಬಿಡದು ವಾರಿಜೋದ್ಭವ ಅಜಭವಾದಿಗಳ ಕಾಡುತಿಹುದು ||ಪ|| ವೀರಭೈರವನಂತೆ ತಾನು ಬತ್ತಲೆಯಂತೆ ಮಾರಿ ಮಸಣಿಗಳಂತೆ ತಿರಿದು ತಿಂಬರಂತೆ ಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆ ಮೂರೆರಡು ತಲೆ ಹರಗೆ ಕೈಲಿ ಕಪ್ಪರವಂತೆ ||1|| ಶಿಷ್ಟ ಹರಿಶ್ಚಂದ್ರನಿಗೆ ಮಸಣದಡಿಗೆಯಂತೆ ಸೃಷ್ಟಿಸುವ ಬೊಮ್ಮನಿಗೆ ಶಿರ ಹೋಯಿತಂತೆ ಅಷ್ಟದಿಕ್ಪಾಲಕರು ಸೆರೆಯಾಗಿರುವರಂತೆ ಕಟ್ಟುಗ್ರದಿಂದ್ರನಿಗೆ ಮೈಯೆಲ್ಲ ಕಣ್ಣಂತೆ ||2|| ಹನ್ನೊಂದಕ್ಷೋಹಿಣಿ ಬಲವುಳ್ಳ ಕೌರವನು ರಣದೊಳಗೆ ತೊಡೆಮುರಿದು ಬಿದ್ದನಂತೆ ವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆ ವನಿತೆ ಧರ್ಮಜನ ತಾಯ್ತಿರಿದುಂಡಳಂತೆ ||3|| ಧರೆಗೆ ಧರ್ಮಜನಂತೆ ಕಂಕಭಟ್ಟನಂತೆ ಶೂರ ಭೀಮನು ಬಾಣಸಿಗನಾದನಂತೆ ವೀರ ಫಲಗುಣನಂತೆ ಕೈಯೊಳಗೆ ಬಳೆಯಂತೆ ಕಿರಿಯ ನಕುಲ ಸಹದೇವರು ತುರುಗಾಯ್ದರಂತೆ ||4|| ಹರನ ವಾಹನವಂತೆ ಹುಲ್ಲು ತಿಂಬುವುದಂತೆ ವಿರಂಚಿ ವಾಹನವಂತೆ ಕಮಲ ಭಕ್ಷಿಪನಂತೆ ಹರಿಯ ಹೊತ್ತಿಹನಂತೆ ಹಾವು ಭಕ್ಷಿಪನಂತೆ ಸಿರಿಯಾದಿಕೇಶವನು ತಾ ಬೆಣ್ಣೆಗಳ್ಳನಂತೆ ||5||

Thoughts & Reflections

0

No reflections shared yet. Be the first to share your thoughts!

Share your thought