Bhasaka
← Back to home

ಗಜೇಂದ್ರ ಮೋಕ್ಷ

Author: ಕನಕದಾಸCategory: ಶ್ರೀಕೃಷ್ಣ
ಶ್ರೀನಾಥ ಪಾರ್ವತೀ ನಾಥ ಶರಣೆಂಬೆ ||ಪ|| ವಾಣಿ ಸರಸ್ವತಿಯ ಭಾರತಿಯ ಬಲಗೊಂಬೆ ||ಅ|| ನಾನು ಬಲ್ಲಷ್ಟು ಪೇಳುವೆನು ಈ ಕಥೆಯ ಶ್ರೀನಾಥ ಗಜರಾಜಗೊಲಿದ ಸದ್ಗತಿಯ ||1|| ಚಪ್ಪನ್ನ ದೇಶದೊಳಗೆ ಉತ್ತಮವಾಗಿ ಇಪ್ಪ ಗೌಳಿ ದೇಶದ ರಾಜ ಇಂದ್ರದ್ಯುಮ್ನ ||2|| ವೈರಾಗ್ಯ ಮೂಡಿ ಭೂಸುರರ ಸೇವಿಸುತ ನಾರಾಯಣನ ಮನದಿ ನೆನೆದು ಮೈಮರೆತ ||3|| ಪುತ್ರ ಮಿತ್ರಾದಿ ಬಂಧುಗಳ ವರ್ಜಿಸಿದ ನಿತ್ಯ ನರಹರಿಯ ಎಡೆಬಿಡದೆ ಚಿಂತಿಸಿದ ||4|| ಆನೆ ಕುದುರೆ ರಾಜ್ಯಗಳನೆ ವರ್ಜಿಸಿದ ತಾನೆ ನದಿಗಿಳಿದು ಸ್ನಾನಾದಿಗಳ ಮಾಡಿ ||5|| ಸಂಧ್ಯಾವಂದನೆಗೈದು ಪದ್ಮಾಸನ ಹಾಕಿ ಚಂದಾಗಿ ಧರಿಸಿದ ದ್ವಾದಶ ನಾಮಗಳ ||6|| ಇಂದಿರಾ ಪತಿಯ ಧ್ಯಾನದಿ ಅವನಿರುವಾಗ ಬಂದನಾ ಎಡೆಗೆ ಅಗಸ್ತ್ಯಮುನಿವರೇಣ್ಯ ||7|| ಎದ್ದು ತನಗೆ ವಂದಿಸಲಿಲ್ಲವೆಂದೆನುತ ಕುದ್ದು ಕುಂಜರನಾಗೆಂದು ಶಾಪವಿತ್ತ ||8|| ನಂದು ತಪ್ಪುಂಟು ಮಹರ್ಷಿಯೆ ಕಾಪಾಡು ಮುಂದೆನಗೆ ವಿಶ್ಶಾಪವೆಂದು ಹೇಳೆನಲು ||9|| ವಿಷ್ಣು ಚಕ್ರವು ಬಂದು ನಿಮ್ಮ ಸೋಕಿದರೆ ಆಕ್ಷಣ ವಿಶ್ಶಾಪವೆಂದು ಮುನಿ ನುಡಿದ ||10|| ಜ್ಞಾನವಡಗಿ ಅಜ್ಞಾನ ವೆಗ್ಗಳಿಸಿತು ದಿನಪ ಮುಳುಗಿ ಕತ್ತಲೆ ಆವರಿಸಿದಂತೆ ||11|| ಧ್ಯಾನಿಸುತ ಹಿಂದು ಮುಂದಾಗಿ ನಿಂದಿರಲು ಆನೆಯಾದನು ನೃಪನು ಆಕ್ಷಣದಿ ತಾನು ||12|| ಮೇಲುಗಿರಿ ಪರ್ವತವೆ ಕದಲಿ ಬಂದಂತೆ ಮೇಲುಮದ ಕೀಳುಮದದಿಂದ ಘೀಳಿಟ್ಟು ||13|| ಹೆಣ್ಣಾನೆಗಳ ಕೂಡಿ ಸಂತತಿಯ ಪಡೆದು ಹಣ್ಗೊನೆಗಳ ಮೆದ್ದು ತಣ್ಣನೆಯ ನೀರ್ಕುಡಿದು ||14|| ಕಂಡಕಂಡಲ್ಲಿ ಓಡುತಲಿ ಇಳಿಯುತಲಿ ತುಂಡು ತುಂಡಾಗಿ ಮರಗಳನೆ ಮುರಿಮುರಿದು ||15|| ಹಿಂಡು ಹಿಂಡಾಗಿದ್ದ ಸತಿ ಸುತರ ಕೂಡಿ ದಂಡು ದಾಳಿಯನಿಟ್ಟ ತೆರದಿ ಅಂಡಲೆಯೆ ||16|| ಬೆಂಡಾಗಿ ಬಾಯಾರಿ ಸುತ್ತಲೂ ನೋಡಿ ಹೊಂಡ ಕಂಡತ್ತ ಧಾವಿಸಿತು ಸಕುಟುಂಬಿ ||17|| ಸುತ್ತಮುತ್ತ ಅಶ್ವತ್ಥ ಹೇರಳೆ ಕಿತ್ತಳೆ ಒತ್ತಾಗಿ ದಾಳಿಂಬ ದ್ರಾಕ್ಷಿ ಖರ್ಜೂರ ||18|| ಬಾಗಿ ತೂಗುತ್ತ ಫಲವಾದ ಫಲವೆಲ್ಲ ತೂಗಿ ಕರೆಯುತ್ತ ಮೇಲಾದ ಹೂವೆಲ್ಲ ||19|| ಉಲಿವ ಗಿಳಿ ಹಿಂಡುಗಳು ಕುಣಿವ ನವಿಲುಗಳು ನಲವಿಂದ ಸರಗೈವ ಕೋಗಿಲೆಯ ದಂಡು ||20|| ದಂಡೆಯೊಳು ಒಳಗೊಂಡ ತಾವರೆಯ ಕೊಳಕೆ ಶುಂಡಾಲವಿಳಿದು ನೀರೋಕುಳಿಯನಾಡಿ ||21|| ಸೊಂಡಿಲಿಂದಪ್ಪಳಿಸುತ ತೊತ್ತಳ ತುಳಿದು ಹೊಂಡವನು ಕಲಕಿ ರಣಾಂಗಣಗೈದಾಗ ||22|| ಆ ಮಡುವಿನಲ್ಲಿದ್ದ ಶಾಪಗ್ರಸ್ತವಹ ಮಾಮೊಸಳೆಯೊಂದು ಹಿಡಿಯಿತಾನೆಯ ಕಾಲ ||23|| ಕಾಲೆತ್ತಲೂ ಬರದು ಕಿತ್ತರೂ ಬರದು ಆಲಿಟ್ಟುದನು ಕೇಳಿ ಸತಿಸುತರೆಲ್ಲ ||24|| ಒಗ್ಗೂಡಿ ಎಳೆದೆಳೆದು ಸೊರಗಿ ಸುಸ್ತಾಗಿ ಕುಗ್ಗಿ ಕಂಗೆಟ್ಟು ಹಿಮ್ಮೆಟ್ಟಿ ನಿಂತಾಗ ||25|| ದೇವರಿಟ್ಟಂತಾಗಲಿ ನೀವು ತೆರಳಿರೆನೆ ನೋವುಗೊಂಡವು ಬಂದ ದಾರಿಯ ಹಿಡಿದವು ||26|| ಇತ್ತ ಆ ಮಕರಿ ಕಚ್ಚುತ್ತ ಕಡಿಯುತ್ತ ನೆತ್ತರಾಯಿತು ಮಡುವಾದ ಮಡುವೆಲ್ಲ ||27|| ಗಜರಾಜ ನನಗಿನ್ನು ದಿಕ್ಕಾರು ಎಂದು ಅಜಪಿತಗೆ ಮೊರೆಯಿಟ್ಟಿತು ಪರಿಪರಿಯಿಂದ ||28|| ಈರೇಳು ಭುವನವನು ಕಾಯುವಾ ದೇವ ನೀರೊಳಗೆ ಸಾಯುತಿಹೆ ಬದುಕಿಸೋ ಎನ್ನ ||29|| ವೇದ ಕದ್ದೊಯ್ದ ದಾನವನ ಛೇದಿಸಿದ ವೇದವಿದ ಮತ್ಸ್ಯಾವತಾರಿ ಸಲಹೆನ್ನ ||30|| ಕಡೆಗೋಲು ಕುಸಿದಾಗ ಹಿಡಿದೆತ್ತಿ ನಿಂತ ದೃಢದೇಹಿ ಕೂರ್ಮಾವತಾರಿ ಸಲಹೆನ್ನ ||31|| ಹಿರಣ್ಯಾಕ್ಷನ ಕೊಂದು ಧರಣಿಯನೆ ತಂದ ವರಾಹಾವತಾರಿಯೆ ಬಂದು ಕಾಯೆನ್ನ ||32|| ರಕ್ಕಸನ ಸೀಳಿ ಕರುಳ ಮಾಲೆ ಧರಿಸಿದ ಬೆಕ್ಕಸಬೆರಗಿನ ನೃಸಿಂಹಾವತಾರಿ ಕಾಯೆನ್ನ ||33|| ಬಲಿಯ ದಾನವ ಬೇಡಿ ಪಾತಾಳಕೆ ತುಳಿದ ಕಲಿ ವಾಮನಾವತಾರಿಯೆ ರಕ್ಷಿಸೆನ್ನ ||34|| ತಂದೆ ಸಾವಿಂದ ಕ್ಷತ್ರಿಯರ ಕೊಲೆಗೈದ ತಂದೆ ಪರಶುರಾಮಾವತಾರಿ ಸಲಹೆನ್ನ ||35|| ದಶಕಂಠನನೆ ಕೊಂದು ದರಣಿಜೆಯ ತಂದ ದಾಶರಥಿ ರಾಮಾವತಾರಿ ಸಲಹೆನ್ನ ||36|| ವ್ಯಾಳನ ತುಳಿದು ಸೋಳಸಾಸಿರ ಹೆಣ್ಣ ನಾಳಿನ ಕೃಷ್ಣಾವತಾರಿ ಕಾಯೆನ್ನ ||37|| ಕತ್ತಲೆ ಜಗದ ಕನ್ಯೆಯರ ವ್ರತಗೆಡಿಸಿದ ಬತ್ತಲೆಯ ಬೌದ್ಧಾವತಾರಿ ಉಳಿಸೆನ್ನ ||38|| ಜಗವದುರೆ ಹಯವೇರಿ ದುಷ್ಟರನು ಕೊಂದ ಮಿಗೆ ಚದುರ ಕಲ್ಕ್ಯವತಾರಿ ಎತ್ತೆನ್ನ ||39|| ಕರುಣಾಕರನೆ ಭಕ್ತ ವತ್ಸಲನೆ ಕಾಯೊ ಮರೆಯದಿರು ಮಾಧವನೆ ಅಚ್ಯುತಾನಂತನೆ ||40|| ಇಂತು ಪ್ರಾಣದ ಹಂಗುದೊರೆದು ಚೀರ್ದಾಗ ಕಂತುಪಿತ ಕೇಳಿ ಮಂತಾಡಿದಂತಾಗಿ ||41|| ಹಾಲ್ಗಡಲ ವಾಸಿ ಹಾವು ಹಾಸಿಗೆ ಬಿಟ್ಟು ಪಾಲಿಸಲು ಪರಿತಂದ ಗಜೇಂದ್ರನ ಬಳಿಗೆ ||42|| ಹರನು ಪಾರ್ವತಿಯೊಡನೆ ವೃಷಭವನೇರಿ ತ್ವರಿತದಿಂ ಬಂದರಲ್ಲಿಗೆ ಕಾತರದಿ ||43|| ದೇವಾನುದೇವತೆಗಳು ಮುನಿವರೇಣ್ಯರು ಕಾವನಯ್ಯನ ಹಿಂದೆ ಬಂದರೋಡೋಡಿ ||44|| ನಕ್ರನ ಹಲ್ಲು ಮುರಿವಂತೆ ಜಗದೊಡೆಯ ಚಕ್ರದಲಿಡಲು ಶಾಪ ವಿಮುಕ್ತಿ ದೊರಕಿತು ||45|| ಋಷಿ ದೇವಲನ ಶಾಪದಿಂ ಗಂಧರ್ವ ಋಷಿ ಅಗಸ್ತ್ಯನ ಶಾಪದಿಂ ಪ್ರದ್ಯುಮ್ನ ||46|| ಇರ್ವರೂ ವಿಶ್ಯಾಪದಿ ಮೊದಲಂತಾದರು ಸರ್ವರೂ ಆದಿಕೇಶವನ ಕೊಂಡಾಡಿದರು ||47||

Thoughts & Reflections

0

No reflections shared yet. Be the first to share your thoughts!

Share your thought