Bhasaka
← Back to home

ಕಬೀರ ಬೀರಿದ ಬೆಳಕು

Author: ಸ್ವಾಮಿ ಪುರುಷೋತ್ತಮಾನಂದCategory: ಇತರೆ
ಗುರುವಿಗೆ ವಂದನೆ ಮೊದಲು ನಂತರ ಗಣಪತಿಗೆ | ಬಳಿಕ ದೇವಿ ಶ್ರೀಶಾರದೆಗೆ ಇವರ ಕೃಪೆಯು ನಮಗೆ - ಕಬೀರಾ॥ ಸದ್ಗುರು ಮಹಿಮೆ ಅನಂತ ಸದ್ಗುರು ಕೃಪೆಯೂ ಅನಂತ । ಅವನ ನಯನಗಳು ಅನಂತವೈ ತೋರಿದನವನು ಅನಂತ - ಕಬೀರಾ॥ ತೀರ್ಥಯಾತ್ರೆಗೆ ಫಲ ಒಂದು ಸಾಧುಸಂಗಕೆ ನಾಲ್ಕು | ಸದ್ಗುರುಸಂಗಕೆ ಅನೇಕ ಫಲವು ಇದುವೇ ಸಂತರ ಮತವು - ಕಬೀರಾ॥ ಸದ್ಗುರು ಬೋಧಿಸೆ ಶಿಷ್ಯನು ಸದ್ಗುರುವೆ ಆದನು । ಇದ್ದಿಲು ಬೆಂಕಿಯ ಸ್ಪರ್ಶದಿಂದ ಬೆಂಕಿಯೆ ಆದಂತೆ - ಕಬೀರಾ॥ ಉತ್ತಮ ಜನ್ಮ ದೊರೆಯುವುದು ಇದುವೇ ಹರಿಕೃಪೆಯ್ಯೆ | , ಜನ್ಮವಿಲ್ಲದಂತಾಗುವುದು ಇದುವೇ ಗುರುಕೃಪೆಯ್ಯೆ - ಕಬೀರಾ॥ ಪ್ರೇಮವೆ ಇಲ್ಲದ ಮನುಜ ಪ್ರಾಣಿಗೆ ಸಮ ತಿಳಿಯೋ | ಗಾಳಿಯಾಡಿದರು ಪ್ರಾಣವಿರದ ಕಮ್ಮಾರನ ತಿದಿಯೋ - ಕಬೀರಾ॥ ನಾನು ಇದ್ದಾಗ ದೇವನಿಲ್ಲ ಈಗ ದೇವನಿಹ ನಾನಿಲ್ಲ | ಕತ್ತಲು ಕರಗಿಯೆ ಹೋಯಿತಲ್ಲ ಬೆಳಕ ಕಂಡೆನಲ್ಲ - ಕಬೀರಾ॥ ನನ್ನದೆಂಬುದೇನಿಲ್ಲ ಇರುವುದು ನಿನ್ನದೆ ಎಲ್ಲ | ನಿನ್ನದೆ ನಿನಗೆ ಅರ್ಪಿಸುತಲಿ ನೆಮ್ಮದಿಯಿಂದಿರುವೆ - ಕಬೀರಾ॥ ಚಂದ್ರನ ತಂಪು ತಂಪಲ್ಲ ಹಿಮದ ತಂಪೂ ತಂಪಲ್ಲ | ಸಾಧುಸಂತರ ದಿವ್ಯ ಸಂಗ ತಂಪಿನಲೂ ತಂಪು - ಕಬೀರಾ॥ ಸಂತರ ಸೇವೆಯು ನಡೆಯದ ಮನೆಯು ಅವಲಕ್ಷಣಗಳ ತಾಣ | ಆ ಮನೆ ಮಸಣವು ಎಂದು ತಿಳಿದು ಭೂತಗಳಾಡುವುವು - ಕಬೀರಾ॥ ಸ್ವತಃ ರಾಮ ಕರೆದಾಗಲೂ ಕಬೀರಗೇನೋ ದುಗುಡ | ಸಾಧುಸಂಗದಲಿ ದೊರೆವಾನಂದ ವೈಕುಂಠದಲೂ ಇಲ್ಲ - ಕಬೀರಾ॥ ಭೂಮಿ ಸಹಿಸುವುದು ಅಗೆಯುವುದ ಕಡಿಯುವುದನು ಮರವು | ಸಾಧು ಸಹಿಸುವನು ಕಠಿಣ ವಚನವ ಸಹಿಸರು ಇನ್ನಾರು - ಕಬೀರಾ || ದೇವನ ದಾರಿಯು ಸುಗಮ ನಿನ್ನ ನಡೆಯೆ ವಕ್ರ | ಕುಣಿಯಲು ಬಾರದ ನರ್ತಕನು ನೆಲವೇ ಡೊಂಕೆಂದ - ಕಬೀರಾ॥ ದೇಹಧಾರಿ ಯಾರೇ ಇರಲಿ ದಂಡವ ತೆರಬೇಕು | ಅಜ್ಞಾನಿ ತೆರುವನು ರೋದಿಸುತ ಜ್ಞಾನಿಯು ನಗುನಗುತ - ಕಬೀರಾ || ಜಗದೀಶಗೆ ಶರಣಾದವನು ಅವ ಹೆದರುವನೇನು? ಆನೆಯ ಮೇಲೆ ಕುಳಿತಿರುವವಗೆ ಶ್ವಾನವು ಬೊಗಳಿದರೇನು? - ಕಬೀರಾ || ನಿಂದಕರಿಗೊಂದು ಕುಟಿಯನು ಕಟ್ಟಿ ಮನೆ ಮುಂದಿರಗೊಡಿರಿ | ನೀರು-ಸಾಬೂನುಗಳಿಲ್ಲದೆಯೇ ನಿರ್ಮಲಗೊಳಿಸುವರು - ಕಬೀರಾ || ಗೋಧನ ಗಜಧನ ರತ್ನಧನ ಏನದ್ಭುತ ಜನಧನ | ಸಂತೋಷಧನವು ದೊರೆತಾಗ ಎಲ್ಲವು ಧೂಳಿ ಸಮಾನ - ಕಬೀರಾ || ರಾತ್ರಿ ಕಳೆಯಿತು ನಿದ್ರೆಯಲಿ ದಿನ ಕಳೆಯಿತು ಊಟದಲಿ | ರತ್ನದಂಥ ಈ ನರಜನ್ಮ ಮೂರ್ಕಾಸಿಗೆ ಹೋಯ್ತು - ಕಬೀರಾ || ಅಂತಹ ಧನವನೆ ಗಳಿಸಲುಬೇಕು ಪರಗತಿಗು ಆಗಬೇಕು | ಹೊರಡುವ ದಿನ ಅದ ಒಯ್ಯುವಾಗ ಕಾಣರು ಅದನ್ಶಾರು - ಕಬೀರಾ॥ ಎತ್ತಣಿಂದ ನೀ ಬಂದೆಯೋ ಹೋಗುವುದು ಎತ್ತಲೋ | ಇತ್ತಿಂದತ್ತ ಅತ್ತಿಂದಿತ್ತ ಮೂಲ ಮರೆತೆಯಲ್ಲೊ - ಕಬೀರಾ॥ ಬೀಜದೊಳಗೆ ಇದೆ ಎಣ್ಣೆ ಹಾಲಿನೊಳಗೆ ಇದೆ ಬೆಣ್ಣೆ | ನಿನ್ನಯ ದೇವ ನಿನ್ನೊಳಗಿಹನೈ ಕೈಲಾದರೆ ನೋಡೈ - ಕಬೀರಾ॥ ಮಾಯೆಯೊಂದು ಉರಿಯುವ ದೀಪ ಮನುಜನೇ ಪತಂಗ | ಪತಂಗ ದೀಪದಿ ಬೀಳುವ ತೆರದಿ ಮನುಜ ಮಾಯೆಯೊಳಗೆ - ಕಬೀರಾ|| ಜಪಮಾಲೆಯು ತಿರುಗುತಲೇ ಉರುಳಿತು ಯುಗವೊಂದು | ಚಂಚಲ ಮನದ ತಿರುಗಾಟ ನಿಲ್ಲಲಿಲ್ಲವಿನ್ನೂ - ಕಬೀರಾ || ಮೈತೊಳೆದರೆ ಏನಾಯಿತು ಮನದ ಕೊಳೆಯು ಹೋದೀತೆ? | ಮನವನು ಮಥಿಸಿ ವಿವೇಚನೆ ನಡೆಸೆ ಮನ ನಿರ್ಮಲವಹುದು - ಕಬೀರಾ || ಯತಿಗಳ ಜಾತಿಯ ಕೇಳಬೇಡ ಅವರ ಜ್ಞಾನವನು ನೋಡು | ಖಡ್ಗದ ಬೆಲೆಯನು ಮಾತ್ರ ಕಟ್ಟು ಒರೆಯನು ಬದಿಗಿಟ್ಟು - ಕಬೀರಾ|| ಕೆಡುಕರನು ನಾ ಹುಡುಕುತ ಹೊರಟೆ ಕೆಡುಕರಾರು ಸಿಗಲಿಲ್ಲ | ನನ್ನಯ ಮನವನು ನಾನೇ ನೋಡೆ ನನಗಿಂತ ಕೆಡುಕರಿಲ್ಲ - ಕಬೀರಾ || ಕುಟಿಲವಚನ ಬಲು ಕೆಟ್ಟದು ಮನ ವಿಷಮಯವಹುದು | ಸಾಧುವಚನ ಪರಿಶುದ್ಧ ಮಧುರ ಸುಧೆಯನೆ ಸುರಿಸುವುದು - ಕಬೀರಾ || ಆಡುವ ನುಡಿ ಇಂತಿರಬೇಕು ಶಾಂತಿ ನೆಲಸಬೇಕು | ಇತರರ ಶಾಂತಿಗೆ ಶ್ರಮಿಸುತ ನಾವೇ ಶಾಂತಿಯ ಪಡೆಯುವೆವು - ಕಬೀರಾ || ಶೀಲವಂತನೇ ಶ್ರೇಷ್ಠನು ಸಕಲ ರತ್ನಗಳ ಗಣಿಯು | ಮೂಲೋಕದ ಸಿರಿಸಂಪದವೆಲ್ಲ ಶೀಲದೊಳಗೆ ಇಹುದು - ಕಬೀರಾ || ಮಾತಿನ ಗದ್ದಲ ನಿಲ್ಲಿಸಿ ಸ್ಮರಣೆಯ ಸುಖದಲಿ ಮುಳುಗೋ | ಹೊರಗಿನ ಪರದೆಯ ಮುಚ್ಚಿ ನೀನು ಒಳಗಣ ಪರದೆಯ ತೆರೆಯೋ - ಕಬೀರಾ || ಭಜಿಸುವುದಾದರೆ ಈಗಲೆ ಭಜಿಸು ಇನ್ನೆಂದಿಗೆ ಭಜಿಸುವುದು। ಹಚ್ಚ ಹಸಿರು ವೃಕ್ಷವು ಕೂಡ ಕಟ್ಟಿಗೆಯಾಗುವುದು - ಕಬೀರಾ|| ಮಲಗಿದ್ದರೆ ಏನಹುದು ಎದ್ದು ಜಪವ ಮಾಡು | ಮಲಗಲೊಂದು ದಿನ ಬರಲಿಹುದು ಕಾಲುದ್ದಕೆ ಚಾಚಿ - ಕಬೀರಾ || ಕರದಲಿ ಮಾಲೆಯು ತಿರುಗುವುದು ಬಾಯಲಿ ನಾಲಿಗೆಯು | ದಶದಿಶೆಯಲಿ ಮನ ತಿರುಗುವುದು ಇದೇ ಇವರ ಜಪವು - ಕಬೀರಾ|| ರಾಜ ರಾಯ ಸಿರಿವಂತನಿಗಿಂತ ಸ್ಮರಿಸುವವನೆ ದೊಡ್ಡವ | ಯಾವ ಕಾಮನೆಯು ಇಲ್ಲದ ಅವನು ದೊಡ್ಡವರಲು ದೊಡ್ಡವ - ಕಬೀರಾ || ಹಿಡಿದು ತಿನ್ನುವನು ಯಮರಾಯ ಅವನಾರನು ಬಿಡನು | ನಾಮದ ಪ್ರೇಮಿಯ ಕಂಡೊಡನೆ ಗಡಗಡ ನಡುಗುವನು - ಕಬೀರಾ॥

Thoughts & Reflections

0

No reflections shared yet. Be the first to share your thoughts!

Share your thought