← Back to home
ಅವ್ಯಕ್ತದಿಂದುದಿಸಿ ವ್ಯಕ್ತವೇಷವ ಧರಿಸಿ
Author: ಹೆಚ್ ಎನ್ ಮುರಳೀಧರCategory: ಶ್ರೀರಾಮಕೃಷ್ಣRaaga: ಶಿವರಂಜಿನಿTaala: ಝಪತಾಳ
ॐ
ಅವ್ಯಕ್ತದಿಂದುದಿಸಿ ವ್ಯಕ್ತವೇಷವ ಧರಿಸಿ
ನಿಂದಿರುವ ಮಾಂತ್ರಿಕನು ಪುಂಗಿ ನುಡಿಸೆ |
ಆ ಅನಾಹತ ನಾದ ಜಗವ ಜುಮ್ಮೆನಿಸಿತ್ತು
ಸಕಲ ಸಚರಾಚರವ ಮರುಳುಗೊಳಿಸೆ ||
ನಾಮರೂಪಾತೀತನೆಂಬ ಹೆಸರನು ಹೊತ್ತು
ಕಾಲದೇಶದ ಗಡಿಗಳಾಚೆಯಿಂದಡಿಯಿಟ್ಟು
ಬಂದು ಮೈದೋರಿರುವ ಮಂತ್ರಗಾರ |
ವೈರಾಗ್ಯವೇತ್ರವನು ಗರಗರನೆ ತಿರುಗಿಸುತ
ಭವಭ್ರಾಂತಿಯನ್ನೊದೆದ ತಂತ್ರಗಾರ ||
ಸರ್ವಧರ್ಮಗಳನ್ನು ಮಣಿಗಳನೆ ಮಾಡುತ್ತ
ತನ್ನ ಸಿರಿಬಾಳ ಶ್ರೀಸೂತ್ರದಲಿ ಪೋಣಿಸುತ
ತಾನೆ ಧರಿಸುತ ಮೆರೆದ ಸೂತ್ರಧಾರ |
ವಚನವೇದದ ಮಧುರ ಮಂತ್ರಘೋಷವ ಮೊಳಗಿ
ಲೌಕಿಕವ ಕಳೆವ ಪರಮಾರ್ಥಸಾರ ||
Thoughts & Reflections
0No reflections shared yet. Be the first to share your thoughts!