Bhasaka
← Back to home

ಕೆಳಗಿಳಿದು ಹರಿಯುವುದೆ

Author: ಸ್ವಾಮಿ ಶಾಸ್ತ್ರಾನಂದCategory: ಶ್ರೀಕೃಷ್ಣRaaga: ರಾಗಮಾಲಿಕೆTaala: ಝಪತಾಲ
ಕೆಳಗಿಳಿದು ಹರಿಯುವುದೆ ಜಲದ ನಿಜಗುಣವಯ್ಯ ತಳೆಯುವುದು ಮಲಿನತೆಯ ಕೊಳೆನೆಲದಿ ಹರಿಯುತ್ತ | ಜಲನಿಧಿಯ ಸೇರಿ ತಾ ಬಲು ಕ್ಷಾರವಾಗುತಲಿ ಸಲಿಲಾರ್ಥಿ ಜನರಿಂಗೆ ಅನಲಸಮವಾಗುವುದು || ಗಗನದಲ್ಲಿಹ ರವಿಯು ಜಗವನೆಲ್ಲವ ಬೆಳಗಿ ಸಗರಜಲವನು ಕೂಡ ನಗುತ ಕರದಿಂದೆತ್ತಿ| ವಿಗತದೋಷವ ಗೈದು ಮುಗಿಲರೂಪವ ಕೊಡುತ ಜಗಕೆಲ್ಲ ಸವಿತರುವ ಮಿಗೆ ಸೊಗದ ಮಳೆಕರೆವ || ಜಲದವೊಲು ಎಮ್ಮ ಮನ ಕೆಳಮೊಗವು ಚಂಚಲವು ನಲಿನಲಿದು ಹರಿಯುವುದು ಮಲಿನಮಯ ವಿಷಯದೆಡೆ | ಜಲಜಾಕ್ಷ ಕೃಪೆಯಿಂದ ಒಲಿದೆಮ್ಮ ಬಾಳ್ಗಳನು ಜಲಮೂರ್ತಿ ಮೇಲೆತ್ತಿ ಸಲಹಯ್ಯ ಸ್ವಾಮಿ ||

Thoughts & Reflections

0

No reflections shared yet. Be the first to share your thoughts!

Share your thought