← Back to home
ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
Author: ಕನಕದಾಸCategory: ಶ್ರೀಕೃಷ್ಣRaaga: ಕಾಂಬೋಧಿTaala: ಝಂಪೆತಾಳ
ॐ
ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು ||ಪ||
ಉಂಬುಡುವುದಕಿಲ್ಲದರಸಿನೋಲಗಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು
ಹಂಬಲಿಸಿ ಹಾಳ್ಹರಟೆ ಹೊಡೆವುದಕಿಂತ- ಹರಿ
ಯೆಂಬ ದಾಸರ ಕೂಡೆ ಸಂಭಾಷಣೆಯೆ ಲೇಸು ||1||
ಒಡನೆ ಹಂಗಿಸುವನೋಗರವನುಂಬುದಕಿಂತ
ಕುಡಿನೀರು ಕುಡಿದುಕೊಂಡಿರುವುದೇ ಲೇಸು
ಬಿಡದೆ ಬಾಂಧವರೊಡನೆ ಕಡಿದಾಡುವುದಕಿಂತ
ಅಡವಿಯೊಳಗಜ್ಞಾತ ವಾಸವೇ ಲೇಸು ||2||
ಮಸೆಯುತಿಹ ಮತ್ಸರದ ನೆರೆಯೊಳಿರುವುದಕಿಂತ
ಹಸನಿಲ್ಲದ ಹಾಳುಗುಡಿಯೇ ಲೇಸು
ಬಿಸಜಾಕ್ಷ ಕಾಗಿನೆಲೆಯಾದಿಕೇಶವರಾಯ
ವಸುಮತಿಯೊಳು ನಿನ್ನ ದಾಸತ್ವವೇ ಲೇಸು ||3||
Thoughts & Reflections
0No reflections shared yet. Be the first to share your thoughts!