Bhasaka
← Back to home

ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ

Author: ಕನಕದಾಸCategory: ಇತರೆRaaga: ಸಾವೇರೀTaala: ಮುಟ್ಟೆತಾಳ
ಅಹುದಾದಡಹುದೆನ್ನಿ ಅಲ್ಲವಾದಡಲ್ಲವೆನ್ನಿ ಸಹಜವಿದು ಸಜ್ಜನರ ಮನಕೆ ಸಮ್ಮತವು ||ಪ|| ಕರಿಕೆಯಿಲ್ಲದ ಬಾಳು ಕರಿವರದನ ದಯೆ ಕೇಳು ಅರಿತವರಿರೆ ಮನೆಯೊಳು ಅದು ಸ್ವರ್ಗವು ಕೇಳು ಕರಣಿಕರೊಳಗಣ ನಂಟು ಕಟ್ಟಿದ ಹಣವಿನ ಗಂಟು ಗುರುವಿನ ವಾಕ್ಯದಿ ಭಕ್ತಿ ಇಹಪರಕದು ಮುಕ್ತಿ ||1|| ಒಕ್ಕಲಿಗಾಗದ ಗವುಡ ಮೇಲೆರಗಿ ಕುಕ್ಕುವ ಲಗಡ ಮಕ್ಕಳ ಪಡೆವುದು ಪುಣ್ಯ ನಲಿವು ನಗೆಗಳ ಪಣ್ಯ ಇಕ್ಕುವ ಅನ್ನವು ಧರ್ಮ ಇಹಪರಕದು ಅತಿ ಧರ್ಮ ಬಿಕ್ಕಳಿಕಿಕ್ಕಿದ ವ್ಯಾಧಿ ಯಮಪುರಕದು ಹಾದಿ ||2|| ಕಂಡರೆ ಸೇರದ ನಾರಿ ಕೆಂಡವನುಗುಳುವ ಮಾರಿ ದಂಡವ ತೆರಿಸುವ ಪುತ್ರ ಹಗೆಗಳಿಗವ ಮಿತ್ರ ಉಂಡರೆ ಸೇರದ ತಾಯಿ ಉರಗನ ಮೆಕ್ಕೆ ಕಾಯಿ ಹಿಂಡನಗಲಿದ ಗೋವು ಹುಲಿಗಿಕ್ಕಿದ ಮೇವು ||3|| ಪರನಾರಿಯರೊಡನಾಟ ಗರಳವನಟ್ಟುಂಬಾಟ ಬರೆದೂ ಅರಿಯದ ಲೆಕ್ಕ ಕಡೆಯಲಿ ಬಹು ದುಕ್ಕ ಇರಿತಕೆ ಬೆದರುವ ಮದಕರಿ ಬಾಯ್ಕಿರಿವ ಕೋಡಗ ಮರಿ ಕರೆ ಬರಲರಿಯದ ಗಂಡ ಅವ ನಾಚಿಕೆ ಭಂಡ ||4|| ಸಮಯಕ್ಕೊದಗದ ಅರ್ಥ ಸಾವಿರವಿದ್ದರು ವ್ಯರ್ಥ ಸವತಿಯರೊಳಗಣ ಕೂಟ ಎಳನಾಗರ ಕಾಟ ಅಮರರಿಗೊದಗದ ಯಾಗ ಆಡಿನ ಮೇಲಣ ರೋಗ ನಮ್ಮ ಆದಿಕೆಶವನ ಭಕ್ತ ಅವ ಜೀವನ್ಮುಕ್ತ ||5||

Thoughts & Reflections

0

No reflections shared yet. Be the first to share your thoughts!

Share your thought