Bhasaka
← Back to home

ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ

Author: ಕನಕದಾಸCategory: ಇತರೆRaaga: ಮುಖಾರಿTaala: ಝಂಪೆತಾಳ
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ||ಪ|| ಬಹುಜನರು ನೆರೆ ತಿಳಿದು ಪೇಳಿ ಮತ್ತಿದನು ||ಅ|| ದೇವರಿಲ್ಲದ ಗುಡಿಯ ಪಾಳು ಬಿದ್ದಂಗಡಿಯು ಭಾವವಿಲ್ಲದ ಭಕುತಿ ಅದು ಕುಹಕ ಯುಕುತಿ ಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣು ಸೇವೆಯರಿಯದ ದಣಿಯು ಕಲ್ಲಿನಾ ಕಣಿಯು ||1|| ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು ಶರ್ಮವಿಲ್ಲದ ಗಂಡು ಕರಿಯ ಒನಕೆಯ ತುಂಡು ಮರ್ಮವಿಲ್ಲದ ಮಾತು ಒಡಕು ಮಡಕೆ ತೂತು ||2|| ಮಕ್ಕಳಿಲ್ಲದ ಸಿರಿಯು ಕೊಳೆತ ತೆಂಗಿನ ತುರಿಯು ಸೌಖ್ಯವಿಲ್ಲದ ಊಟ ಅದು ಕಾಳಕೂಟ ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು ಸೊಕ್ಕಿನಡೆಯುವ ಭೃತ್ಯ ಅವ ಕ್ರೂರ ಕೃತ್ಯ ||3|| ಕಂಡು ಕರೆಯದ ನೆಂಟ ಮೊನೆಯು ಕೆಟ್ಟಿಹ ಕಂಟ ಉಂಡು ನಗದಿಹ ಮೋರೆ ಅದು ಕಹಿಯ ಸೋರೆ ದಂಡಿಗಂಜುವ ಬಂಟ ಒಡಕು ಹರವಿಯ ಕಂಠ ಗಂಡಗಂಜದ ನಾರಿ ಅವಳೆ ಹೆಮ್ಮಾರಿ ||4|| ಬಿಟ್ಟು ನಡೆಯುವ ಗೆಣೆಯು ಹರಕು ತೊಗಲಿನ ಮಿಣಿಯು ಕೊಟ್ಟು ಪೇಳುವ ದಾತ ಅವ ಹೀನ ಜಾತ ಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿ ಮುಟ್ಟಿ ಭಜಿಸದ ನರನು ಅವನೆ ವಾನರನು ||5||

Thoughts & Reflections

0

No reflections shared yet. Be the first to share your thoughts!

Share your thought