Bhasaka
← Back to home

ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ

Author: ಕನಕದಾಸCategory: ಶ್ರೀಕೃಷ್ಣRaaga: ನಾದನಾಮಕ್ರಿಯೆTaala: ಆದಿತಾಳ
ಆನೆ ಬರುತಾದೆ ನೋಡಮ್ಮ ಮದ್ದಾನೆ ಬರುತಾದೆ ||ಪ|| ಆನೆ ಬರುತಾದೆ ಎಲ್ಲರು ನೋಡಿರಿ ಒಂ ದಾನೆಯ ಕೊಂದ ಮದ್ದಾನೆ ಏನೆಂದು ಪೇಳಲಿ ಎಲ್ಲ ದಿಕ್ಕುಗಳಲಿ ತಾನೇ ತಾನಾಗಿ ಮದ ಸೊಕ್ಕಿದಾನೆ ||ಅ|| ನೀರ ಮುಳುಗಿ ಖಳನ ಕೊಂದು ವೇದ ತಂದು ಬರಮದೇವಗಿತ್ತ ಮದ್ದಾನೆ ಕ್ರೂರ ಚಿತ್ರಗುಪ್ತನೊಡನೆ ಕಾರುಬಾರಿಗಿಳಿದ ಜಾರ ಕೃಷ್ಣನೆಂಬ ಸೊಕ್ಕಿದಾನೆ ||1|| ದಶದಿಕ್ಕಿನೊಳು ಘಂಟೆ ಘಣಿರೆಂದು ಬರುತ್ತಿದೆ ಕುಸುಮಶರನ ಪೆತ್ತ ಮದ್ದಾನೆ ದಶಕಂಠನ ಕೊಂದು ಅನುಜಗೆ ಪಟ್ಟಗಟ್ಟಿದ ದಶರಥಸುತನೆಂಬ ಮದ ಸೊಕ್ಕಿದಾನೆ ||2|| ಗಂಧ ಕಸ್ತೂರಿ ಬೊಟ್ಟು ಗಮಕದಿಂದಲಿ ಇಟ್ಟು ಗೊಂದಲಗಡಿಬಿಡಿ ಸುರಲೋಕ ಅಮ್ಮಮ್ಮ ಬೆಂಬಿಡದೆ ದೈತ್ಯರನು ಕೊಂದ ಗುಣ ಸಂಪನ್ನ ಸುಂದರ ಕೃಷ್ಣನೆಂಬ ಮದ ಸೊಕ್ಕಿದಾನೆ ||3|| ಸಾವಿರ ತೋಳವನ ಸರಸದಿಂದಲಿ ಕಡಿದ ಭುವನ ರಕ್ಷಕನಾದ ಮದ್ದಾನೆ ಯೌವನದ ಗೋಪಿಯರ ಕಣ್ಮಣಿ ಎನಿಪ ವಸು ದೇವಸುತನೆಂಬ ಮದ ಸೊಕ್ಕಿದಾನೆ ||4|| ಗರುಡವಾಹನವೇರಿ ಧಿಮಕೆಂದು ಬರುತಾನೆ ಸರುವ ಲೋಕರಕ್ಷಕನೆಂಬ ಮದ್ದಾನೆ ಉರೆ ಪೂತನಿಯ ಹೀರಿ ಮಾವ ಕಂಸನ ಕೊಂದ ಸಿರಿಯಾದಿಕೇಶವನೆಂಬ ಮದ ಸೊಕ್ಕಿದಾನೆ ||5||

Thoughts & Reflections

0

No reflections shared yet. Be the first to share your thoughts!

Share your thought