Bhasaka
← Back to home

ಆರೂ ಸಮಯಕ್ಕೊದಗಲಿಲ್ಲ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಝಂಪೆತಾಳ
ಆರು ಸಮಯಕ್ಕೊದಗಲಿಲ್ಲ ಮೋರೆ ನೋಡುತ ಸುಮ್ಮನಿಹರೆಲ್ಲ ||ಪ|| ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನು ಖಗರಾಜವಾಹನನು ತನ್ನಳಿಯನು ಅಗಜನಂದು ತನ್ನೊಡಲೊಳಿಂಬಿಟ್ಟು ಮೂ ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ ||1|| ಶ್ರೀದೇವಿ ಭೂದೇವಿ ಮಾತೆಯರು ತಾವಿರಲು ಯಾದವರಾಯ ಮೋಹದ ತಂದೆಯು ವೇದಮುಖದಣ್ಣನಿರೆ ಉರಿ ನಯನದಿಂದ ಸ್ಮರ ಬೂದಿಯಾಗುವಾಗ ಬಿಡಿಸಲಿಲ್ಲವೇಕೆ ||2|| ಪಿತನು ಸಾಗರನು ಹಿತದಾಕೆ ಶ್ರೀದೇವಿ ಅತಿ ಬೀಗನಾದವ ನಾರಾಯಣ ಜತೆ ಅಳಿಯರು ಬೊಮ್ಮ ಮನ್ಮಥರಿರಲಾಗಿ ಕ್ಷಿತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ ||3|| ತೆತ್ತೀಸ ಕೋಟಿ ದೇವರ್ಕಳು ತಾವಿರಲು ಒತ್ತಿನಲಿ ಇಂದ್ರ ಉಪೇಂದ್ರರಿರಲು ಮತ್ತೆ ಪಾರ್ವತಿ ಪುತ್ರ ವೀರೇಶ ದಕ್ಷನ ನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ ||4|| ಇಂಥಿಂಥ ದೊಡ್ಡವರು ಈ ಪಾಡು ಪಡಲಾಗಿ ಭ್ರಾಂತ ಮನುಜರಿಗೆ ಪೇಳಲಿನ್ನೆಷ್ಟು ಕಂತುಪಿತ ಕಾಗಿನೆಲೆಯಾದಿಕೇಶವನ ಸಂತೋಷದಿಂ ನೆನೆದು ಸುಖಿಯಾಗೊ ಮನುಜ ||5||

Thoughts & Reflections

0

No reflections shared yet. Be the first to share your thoughts!

Share your thought