Bhasaka
← Back to home

ಆವ ಬಲವಿದ್ದರೇನು ವಾಸುದೇವನಾ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಆಟತಾಳ
ಆವ ಬಲವಿದ್ದರೇನು- ವಾಸು ದೇವನಾ ಬಲವು ನಿಜವಾಗಿ ಇರದನಕ ||ಪ|| ನೊಸಲಗಣ್ಣಿನ ಬಲ ನಾಲ್ಕು ತೆರದ ಬಲ ತ್ರಿಶೂಲ ಡಮರು ಅಗ್ನಿ ಫಣಿಯ ಬಲವು ಪಶುಪತಿಯ ರೂಪಿನ ಬಲದ ಶಿಶುಪಾಲನ ಅಸುರಮರ್ದನ ಕೃಷ್ಣ ಶಿರವ ಛೇದಿಸುವಾಗ ||1|| ಹರನ ಕರುಣದ ಬಲವು ಸುರರ ಗೆಲಿದಾ ಬಲವು ಪರಮಶಕ್ತಿಯು ತನ್ನ ಭುಜದ ಬಲವು ಧರೆಯನೆತ್ತಿದ ಬಲವುಳ್ಳ ಹಿರಣ್ಯಾಕ್ಷನ ಶಿರವ ಹರಿ ವರಾಹನಾಗಿ ತರಿವಾಗ ||2|| ಮುನ್ನ ಗೆಲಿದ ಬಲ ಮುಕ್ಕಣ್ಣ ಹರನ ಬಲ ಘನ್ನ ಲಂಕಿಣಿಯ ಕಾವಲಿನ ಬಲವು ತನ್ನ ವಂಶದ ಬಲವುಳ್ಳ ರಾವಣನ ಶಿರವ ಸನ್ನುತ ರಾಘವ ಪಟ್ಟನೆ ಪಾರಿಸುವಾಗ ||3|| ಲಿಂಗಪೂಜೆಯ ಬಲ ನಿಶ್ಚಿಂತನಾಗಿಹ ಬಲ ಹಿಂಗದೆ ಹರನು ಬಾಗಿಲ ಕಾಯ್ದ ಬಲವು ಮುಂಗೈಯ ಶಕ್ತಿ ಸಾವಿರತೋಳ ಬಾಣನ ತುಂಗ ವಿಕ್ರಮ ಕೃಷ್ಣ ತೋಳ ಖಂಡಿಸುವಾಗ ||4|| ಈಸುದೇವರ ಬಲಗಳಿದ್ದರೆ ಫಲವೇನು ವಾಸುದೇವನ ಬಲವಿಲ್ಲದವಗೆ ದೇಶಕಧಿಕ ಕಾಗಿನೆಲೆಯಾದಿಕೇಶವನ ಲೇಸಾದಿ ಚರಣಕಮಲದ ಬಲವಿರದನಕ ||5||

Thoughts & Reflections

0

No reflections shared yet. Be the first to share your thoughts!

Share your thought