Bhasaka
← Back to home

ಆವ ಸಿರಿಯಲಿ ನೀನು ಎನ್ನ ಮರೆತೆ

Author: ಕನಕದಾಸCategory: ಶ್ರೀರಾಮRaaga: ಕಾನಡಾTaala: ಆಟತಾಳ
ಆವ ಸಿರಿಯಲಿ ನೀನು ಎನ್ನ ಮರೆತೆ ದೇವ ಜಾನಕೀರಮಣ ಪೇಳು ರಘುಪತಿಯೆ ||ಪ|| ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆ ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ಶರಧಿಗೆ ಸೇತುವೆಗಟ್ಟಿದೆನೆನ್ನುವಾ ಸಿರಿಯೆ ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ||1|| ಕಡಲೊಳಗೆ ಮನೆಮಾಡಿ ಮಲಗಿದೆನೆಂಬಾ ಸಿರಿಯೆ ಮೃಢ ನಿನ್ನ ಸಖನಾದನೆಂಬ ಸಿರಿಯೆ ಬಿಡದೆ ದ್ರೌಪದಿ ಮಾನ ಕಾಯ್ದೆನೆಂಬಾ ಸಿರಿಯೆ ದೃಢವಾಗಿ ಹೇಳೆನಗೆ ದೇವಕೀ ಸುತನೆ ||2|| ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ ಕಾಮ ನಿನ್ನ ಸುತನಾದನೆಂಬ ಸಿರಿಯೆ ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ||3|| ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ ಹನುಮ ನಿನ್ನ ಬಂಟನಾದನೆಂಬ ಸಿರಿಯೆ ಬಿನುಗು ದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ ಅನುಮಾನ ಮಾಡದೆ ಪೇಳೊ ನರಹರಿಯೆ ||4|| ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ ಪಂಥವೇ ನಿನಗಿದು ಆವ ನಡತೆ ಕಂತುಪಿತ ಕಾಗಿನೆಲೆಯಾದಿಕೇಶವ ರಂಗ ಚಿಂತೆಯನು ಬಿಡಿಸಿ ಸಂತೋಷವನು ಪಡಿಸೊ ||5||

Thoughts & Reflections

0

No reflections shared yet. Be the first to share your thoughts!

Share your thought