Bhasaka
← Back to home

ಇಂದು ನೀ ಕರೆದು ತಾರೆ

Author: ಕನಕದಾಸCategory: ಶ್ರೀಕೃಷ್ಣRaaga: ಮಧ್ಯಮಾವತಿTaala: ಮುಟ್ಟೆತಾಳ
ಇಂದು ನೀ ಕರೆದು ತಾರೆ- ಬಾರದೆ ಶ್ರೀಗೋ ವಿಂದ ತಾ ಮುನಿದಿಹರೆ- ವಿರಹ ಬೇಗೆಯಲಿ ಬೆಂದು ಸೈರಿಸಲಾರೆ- ಸಖಿ, ನೀನು ತಂದು ತೋರೆ ||ಪ|| ನೊಂದರೂ ಮನದಾನಂದದಿಂದ ನಂದನಂದನನೆಂದು ಸೈರಿಸಿ ಎಂದಿಗೂ ಅಗಲಿರಲಾರೆ ಕರೆತಂದು ಹೊಂದುಗೂಡಿಸೆ ಮಂದಗಮನೆ ||ಅ|| ಕಾಲಿಲ್ಲದಲೆ ಆಡಿದ- ವೇದ ತಂದಿತ್ತ ಕಾಲಿಲ್ಲದವನ ಪೊತ್ತ- ಅಮೃತ ತಂದಿತ್ತ ಕಾಲ ತೂಗಿ ನೋಡುತ್ತ- ಗಜ ಉನ್ಮತ್ತ ಕಾಲಿನಿಂದಲಿ ಕೊಲುವ ರೂಪದಿ ಕಾಲಿನಲಿ ರಿಪುವನು ಸೀಳಿದ ಕಾಲಿನಲಿ ತಾನಳೆದ ಮೇದಿನಿ ಕಾಲಿನಲಿ ನಡೆದ ಭಾರ್ಗವ ಕಾಲಿನಲಿ ವನವಾಸ ಪೋದನ ಕಾಲಿನಲಿ ಕಾಳಿಯನ ಮರ್ದಿಸಿದನ ಕಾಲಿನಲಿ ತ್ರಿಪುರರ ಗೆಲಿದನ ಕಾಲಿಗೆರಗುವೆ ತೇಜಿರೂಢನ ||1|| ಎವೆಯಿಕ್ಕದೆ ನೋಡಿದ- ತಲೆಯ ತಗ್ಗಿಸಿ ಕವಲು ಕೋರೆದಾಡೆಯೊಳಾಡಿದ- ಕಂಬದಿ ಮೂಡಿದ ತವಕದಿಂದಲಿ ಬೇಡಿದ- ಭೂಭುಜರ ಕಡಿದ ಪೌರಾಣಿಕ ವಾವೆ ವರಸೆಯ ಮುಂಡಿಗೆಗಳು ಶಿವನ ಬಿಲ್ಲನು ಮುರಿದ- ದೇವಕಿ ಕುವರ ನಗ್ನ ಹಯವನೇರಿದ ವಿವಿಧಾಬ್ಧಿಯೊಳಾಡಿ ಗಿರಿಧರ ಸವಿದು ಬೇರನು ಬಾಲಗೊಲಿದನ ಅವನಿ ಬೇಡಿ ಕೊಡಲಿ ಪಿಡಿದನ ಸವರಿ ದಶಶಿರ ಬೆಣ್ಣೆ ಕದ್ದನ ಯುವತಿಯರ ವ್ರತಗೆಡಿಸಿ ಕುದುರೆಯ ಹವಣುಗತಿಯಲಿ ಏರಿದಾತನ ||2|| ವರ ಮತ್ಸ್ಯ ನಗಧರನ- ಸೂಕರ ಸಿಂಹನ ತಿರುಕ ತಾಯ್ತರಿದನ- ವರವಿತ್ತು ಶಬರಿಗೆ ತುರುಗಾಯ್ದ ನಿರ್ವಾಣನ- ಅಶ್ವಾರೂಢನ ಊರಿಲ್ಲದೆ ಹೊರೆ ಹೊತ್ತನ ಮುರುಢ ಕ್ರೂರನ ಉರವ ಸೀಳಿದ ವಿಪ್ರ ನೃಪರರಿ ಧರಣಿಜೆಯವರ ಕೃಷ್ಣ ಗಗನದಿ ಪುರವ ದಹಿಸಿದ ತೇಜಿರೂಢನ ಮೆರೆವ ಜಲಜ ಕೂರ್ಮ ವರಹ ನರಹರಿ ದ್ವಿಜ ಕೊರಳಕೊಯ್ದವನ ನೆಲಮಗಳ ವರ ಶೌರಿ ಬುದ್ಧನ ತುರಗವೇರಿದ ಆದಿಕೇಶವನ ||3||

Thoughts & Reflections

0

No reflections shared yet. Be the first to share your thoughts!

Share your thought