Bhasaka
← Back to home

ಇರಬಂದುದಿಲ್ಲ ಸಂಸಾರ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಝಂಪೆತಾಳ
ಇರಬಂದುದಿಲ್ಲ ಸಂಸಾರ- ಇದನರಿತು ಸಿರಿಹರಿಯ ಭಜಿಸುವುದು ಸಾರ ||ಪ|| ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿ ಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿ ಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿ ಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿ ಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿ ಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ ||1|| ದಶರಥ ಮೊದಲು ಷೋಡಶ ರಾಯರುಗಳೆಲ್ಲಿ ಅಸಹಾಯ ಶೂರ ವೀರ ವಿಕ್ರಮರೆಲ್ಲಿ ಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿ ವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿ ಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ ||2|| ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟು ಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟು ಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟು ಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟು ಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟು ಶ್ರೀಪತಿ ಕೇಶವನಲಿಡು ಭಕುತಿ- ಕೊಡುವ ಮುಕುತಿ ||3||

Thoughts & Reflections

0

No reflections shared yet. Be the first to share your thoughts!

Share your thought