Bhasaka
← Back to home

ಎಂತಹುದೊ ನಿನ್ನಯ ಭಕುತಿ

Author: ಕನಕದಾಸCategory: ವೈರಾಗ್ಯRaaga: ಮುಖಾರಿTaala: ಝಂಪೆತಾಳ
ಎಂತಹುದೊ ನಿನ್ನಯ ಭಕುತಿ ಎನಗೆ- ಶ್ರೀ ಕಾಂತ ನಿನ್ನಯ ಒಲುಮೆಯಿಲ್ಲದ ಮೂಢಾತ್ಮನಿಗೆ ||ಪ|| ಹಿಂದೆ ಮಾಡಿದ ಸುಕೃತ ಫಲವು ಮೊದಲಿನಿತಿಲ್ಲ ಇಂದು ಬಂದಡೆ ಒಳ್ಳೆ ಮತಿಯ ಕೊಡಲಿಲ್ಲ ಸಂದ ವಯಸನು ತಿಳಿದು ಕುಂದುತಿದೆ ಎನ್ನ ಮನ ದಂಧಕಾರವ ಬಿಡಿಸಿ ಹೊಂದಿಸು ಜ್ಞಾನವನು ||1|| ವೇದಶಾಸ್ತ್ರ ಶಬ್ದ ತರ್ಕ ಮೀಮಾಂಸೆಗಳ ಓದಿದವನಲ್ಲ ನಿನ್ನಯ ಭಕುತಿಗಧಿಕ ವಾದ ಇನ್ನೊಂದೇನನಸುರುವೆನು ನಾ ಮುನ್ನ ಸಂ ಪಾದಿಸುವ ಭಕುತಿ ಇನ್ನೆಂತಿಹುದೊ ದೇವ ||2|| ಹುಟ್ಟಿದ ಮೊದಲುಗೊಂಡು ಇಂದು ಪರಿಯಂತರವು ಭ್ರಷ್ಟನಾಗಿ ಪರರ ಸೇವೆಯಿಂದಿರುತಿಹೆನು ಇಷ್ಟಲ್ಲದಿನ್ನೆನಗೆ ತೃಪ್ತಿ ಇನ್ನೆಂತಿಹುದೀ ಕಷ್ಟ ಶರೀರದೊಳು ತೊಳಲಲಾರೆನು ಹರಿಯೆ ||3|| ನರಜನ್ಮವೆಂಬ ಪಾತಕದ ಪಂಜರದೊಳಗೆ ಸ್ಥಿರವೆಂಬೊ ಅಹಂಕೃತಿ ಜೀವನವ ನಿರ್ಮಿಸಿ ಎರವಿನ ಮಾತಾಪಿತರನುಜರೆಂಬ ಉರಿಕಾವು ಕ್ಷಯವೆಂಬ ಸರಿಗಳನು ವಂದಿಸುವೆನು ||4|| ಇನಿತು ಪರಿಯಲಿ ನಾನು ಹಲುಬಿದೊಡೆ ನೀನು ಸುಮ್ಮನಿದ್ದೊಡೆ ಬಹು ಅಪಕೀರ್ತಿಯು ನಿನ್ನ ದಾಸಗೊಲಿದು ಸಲಿಸಯ್ಯ ಮನದಿಷ್ಟ ಕನಕಾದ್ರಿಯೊಳು ನೆಲಸಿದಾದಿಕೇಶವರಾಯ ||5||

Thoughts & Reflections

0

No reflections shared yet. Be the first to share your thoughts!

Share your thought