← Back to home
ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ
Author: ಕನಕದಾಸCategory: ಪರಬ್ರಹ್ಮRaaga: ಮಾರವಿTaala: ಆಟತಾಳ
ॐ
ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ ||ಪ|||
ಪರಂಜ್ಯೋತಿ ಪರಬ್ರಹ್ಮ ಪರಮಪುರುಷ ಓಂ ಎಂದು ||ಅ||
ಹುಟ್ಟು ಬಣ್ಣ ಒಂದರೊಳಗೆ ಕಟ್ಟು ಬಣ್ಣ ಒಂದು ಮಾಡಿ
ಕಟ್ಟಿ ಕುಟ್ಟಿ ಕಾಸಿ ಕರಗಿ ಮೂರು ಬಣ್ಣವ
ಮುಟ್ಟಿ ಮಾಡಿ ನಾಲ್ಕು ಬಣ್ಣ ಒಪ್ಪವಿಕ್ಕಿ ಅದರ ಮೇಲೆ
ಗಟ್ಟಿಯಾಗಿ ನೆಲೆಗೆ ನಿಂತವೈದು ಬಣ್ಣವು
ಸೃಷ್ಟಿಯಾರೇಳು ಬಣ್ಣ ಎಂಟು ಒಂಬತ್ತರೊಳಗೆ
ನೆಟ್ಟನೆ ಹತ್ತು ಹನ್ನೊಂದು ಹನ್ನೆರಡು ತೋರುವ
ಘಟ್ಟಿ ಹದಿಮೂರು ಹದಿನಾಲ್ಕು ಹದಿನೈದರಿಂದ
ಕಟ್ಟಕಡೆಗೆ ನಿಂದ ಹದಿನಾರು ಬಣ್ಣ ಓಂ ಎಂದು ||1||
ಭದ್ರಕಂಬ ಒಂದರೊಳಗೆ ಉದ್ದವಾದ ಕೊನೆಯ ಮೇಲೆ
ಸಿದ್ಧಿಯಾದ ಚಿಗುರು ಹೂವು ಕಾಯಿ ಹಣ್ಣನು
ಮೆದ್ದು ಹೋದ ಪಕ್ಷಿ ಬಂದು ಹದ್ದು ಹಿಡಿದು ಉದ್ದಕೆತ್ತಿ
ಬುದ್ಧಿ ಹೀನನಾಗಿ ಬೆಳೆದು ಧರೆಗೆ ಬಿದ್ದುದ
ಕದ್ದು ಮತ್ತೊಬ್ಬ ತರುತಿದ್ದ ದಾರಿಯನ್ನು ಕಟ್ಟಿ
ಒದ್ದು ಹಿಡಿದು ಗುದ್ದಿ ನೂಕಿ ಸೆಳೆದುಕೊಂಡುದ
ಸಾಧ್ಯವಾಯಿತೆಂದು ತನ್ನ ಮನೆಗೆ ತಂದು ಸತಿಗೆ ಕೊಡಲು
ಶುದ್ಧವಾಗಿ ಸುಟ್ಟು ಮಡಗಲೆದ್ದು ಹಾರಿ ಹೋಯಿತೆಂದು ||2||
ತಿಳಿಯುತಿಹುದು ತಿಳಿಯದಿಹುದು ಬೆಳೆಯುತಿಹುದು ಬೆಳೆಯದಿಹುದು
ಹೊಳೆಯುತಿಹುದು ಹೊಳೆಯದಿಹುದು ಸುಳಿಯದಿಹುದು
ತಿಳಿದ ನಾಲ್ಕು ದಿಕ್ಕಿನಲಿ ಹೊಳೆದು ಎಂಟು ದಿಕ್ಕ ತೋರಿ
ಬಳಸಿ ಸುತ್ತ ತಿರುಗುತಿಹುದು ಬಳಲಿ ಬಳಲದೆ
ಒಳಗೆ ಹೊರಗೆ ತೋರುತಿಹುದು ಅಳಿದ ವಸ್ತು ಮುಟ್ಟದಿಹುದು
ಕಳವಳಂಗೆ ಎರಡು ಗುಣವ ತೋರಿ ಮೆರೆವುದು
ತಿಳಿದು ನೋಡೆ ಕೈಗೆ ಸಿಕ್ಕಿ ಒಳಗೆ ಬಯಲ ತೋರುತಿಹುದು
ಪ್ರಣವ ಒಂದು ಕೋಟಿ ನುಂಗಿ ಉಗುಳಿತಿಪ್ಪುದೋಂ ಎಂದು ||3||
ತತ್ತಿಯಾದ ಬ್ರಹ್ಮನೀಗೆ ದಿಕ್ಕು ಅಖಿಲಾಂಡವೆಲ್ಲ
ಹೆತ್ತ ತಂದೆಗಾದವನೆ ನಿತ್ಯವುಳ್ಳವ
ಸತ್ತು ಹುಟ್ಟಲಿಲ್ಲವೆಂದು ಅತ್ತ ನೊಡಿ ಇತ್ತ ತಿರುಗಿ
ತತ್ತಿಯೊಳಗೆ ಬೆಳೆದವೆಲ್ಲ ಸತ್ತವೆನ್ನುತ
ಸತ್ತು ಹೋದ ದೀಪದಂತೆ ಉತ್ಪತ್ತಿಯಾದವಗೆ
ಸತ್ತು ಸತ್ತು ಹುಟ್ಟುವುದು ತಪ್ಪದೆನ್ನುತ
ಎತ್ತಿ ಜಗವ ನುಂಗಿ ತನ್ನ ಹೊಟ್ಟೆಯೊಳಿಂಬಿಟ್ಟುಕೊಂಡು
ಕತ್ತಲೆಗೆ ಕರ್ತೃವೆಂಬ ಜಗವಸತ್ಯ ಕೇಳಿರೋ ಎಂದು ||4||
ಪಂಕಜನ ತಾಯಿ ಸುತನ ಅಂಕದಲ್ಲಿ ಹುಟ್ಟಿ ಜಗವ
ಮಂಕು ಮಾಡುತಿಪ್ಪ ಮಾಯೆ ಹತ್ತು ಶಂಕೆಯ
ಶಂಕೆಕಾರ ಶತ್ರುಮಿತ್ರರಿಬ್ಬರಿಗಾಧಾರವೆಂದು
ಕುಂಕರದಿಪ್ಪತ್ತೊಂದು ಕೋಟಿ ಪಾಶವು
ಓಂಕಾರದೊಳಗೆ ಪುಟ್ಟಿ ಓಂಕಾರದೊಳಗೆ ಬೆಳೆದು
ಓಂಕಾರದೀ ಜಗವ ಎತ್ತಿ ಮೆರೆವುದೋ ಎಂದು ||5||
ಪ್ರಣವ ಒಂದರೊಳಗೆ ಒಂದು ಕೋಟಿಯನ್ನು ತೋರಿ ಪಡೆಯ (ಕಡೆಯ?)
ಕುಣಿಕೆಯೊಳಗೆ ಎಂಟು ಕೋಟಿಯನ್ನು ತೋರುತ
ತೃಣವ ಹಿಡಿದು ಬರೆಯುತಿಪ್ಪ ಒಂದು ರೋಮ ಕೂಪದಲ್ಲಿ
ಕುಣಿಕೆಯೊಳಗೆ ಜಗದ ಜೀವರಾಶಿ ಎಲ್ಲವ
ಸುಳಿದ ವಿಷ್ಣು ಬ್ರಹ್ಮನೆಂಬ ಹಣೆಯ ಕಣ್ಣ ರುದ್ರನೆಂಬ
ಮಣೆಯಗಾರರೆಪ್ಪತ್ತೇಳು ಕೋಟಿ ಸಂಖ್ಯೆಯು
ಹಣೆಯ ಕಾಣದವರ ಕೀಲಿನೆಣಿಕೆಯಲ್ಲಿ ಹೊಲಬುದಪ್ಪಿ
ಪ್ರಣವ ಒಂದು ಕೇಳುತಿಪ್ಪ ಪರಬ್ರಹ್ಮ ಓಂ ಎಂದು ||6||
ನಳಿನಜಾಂಡವೊಂದರೊಳಗೆ ಭುವನ ಪದಿನಾಲ್ಕು ಬಸು
ರೊಳಗೆ ಇಂತು ತಮ್ಮ ಸುಳಿ ನಾಭಿ ಕಮಲ ಮಧ್ಯದಿ
ತಿಳಿದು ನೋಡು ಇತ್ತ ಕೆಳಗೆ ಪಾದ ಮೇಲೆ ಮಸ್ತಕವು
ತೊಳಲಿ ಕಾಣೆ ವೇದವೆಂದು ಬಳಲಿ ಬಳಲದೆ
ಪ್ರಳಯ ಕೋಟಿ ಪ್ರಾಣಿಗಳಿಗೆ ಹೊಳವುಗಾಣಲೀಸದಂತೆ
ಬೆಳೆದು ಹೋಗುವ ಗತಿಯೆಂಬುದಿತ್ತಲರಿಸುತ
ಕಳವಿನವರು ಬಂದು ಇಳೆಯ ಮೇಲೆ ನಿಂದು
ಬಿಳಿಗಿರಿವಾಸ ತಿರುಮಲೇಶ ಆದಿಕೇಶವ ತಾನೆಯೆಂದು ||7||
Thoughts & Reflections
0No reflections shared yet. Be the first to share your thoughts!