Bhasaka
← Back to home

ಏನೆಂದು ಕೊಂಡಾಡಿ ಸ್ತುತಿಸಲೋ

Author: ಕನಕದಾಸCategory: ಶ್ರೀಕೃಷ್ಣRaaga: ಕಲ್ಯಾಣೀTaala: ಝಂಪೆತಾಳ
ಏನೆಂದು ಕೊಂಡಾಡಿ ಸ್ತುತಿಸಲೋ ದೇವ ನಾನೇನು ಬಲ್ಲೆ ನಿನ್ನ ಮಹಿಮೆಗಳ ಮಾಧವ ||ಪ|| ಹರಿಮುಕುಂದನು ನೀನು ನರಜನ್ಮ ಹುಳು ನಾನು ಪರಮಾತ್ಮನು ನೀನು ಪಾಮರನು ನಾನು ಗರುಡ ಗಮನನು ನೀನು ಮರುಳು ಪಾಪಿಯು ನಾನು ಪರಂಜ್ಯೋತಿಯು ನೀನು ದುರುಳ ತಿರುಕನು ನಾನು ||1|| ವಾರಿಧಿಶಯನನಾದ ಕಾರುಣ್ಯನಿಧಿ ನೀನು ಘೋರದಿಂದಿಹ ಕಾಮಿಕ್ರೋಧಿ ನಾನು ಈರೇಳು ಭುವನದೊಳು ಇರುವ ಮೂರುತಿ ನೀನು ದೂರಿ ನಿನ್ನನು ಬಯ್ವ ದುಷ್ಟ ನಾನು ||2|| ಅಣುರೇಣು ತೃಣಗಳಲಿ ಪರಿಪೂರ್ಣನು ನೀನು ಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನು ವಾಣಿಯರಸನ ಪೆತ್ತ ವೈಕುಂಠಪತಿ ನೀನು ಕ್ಷಣಭಂಗುರ ತನುವಿನ ಗೊಂಬೆ ನಾನು ||3|| ಕಂಬದಲಿ ಬಂದ ಆನಂದ ಮೂರುತಿ ನೀನು ನಂಬಿಕೆಯಿಲ್ಲದ ಪ್ರಪಂಚಕನು ನಾನು ಅಂಬರೀಷಗೆ ಒಲಿದ ಅಕ್ರೂರಸಖ ನೀನು ಡಂಬ ಕರ್ಮಿಯು ನಾನು ನಿರ್ಜಿತನು ನೀನು ||4|| ತಿರುಪತಿಯ ವಾಸ ಶ್ರೀ ವೆಂಕಟೇಶನೆ ನಿನ್ನ ಚರಣಸೇವಕರ ಸೇವಕನು ನಾನು ಬಿರುದುಳ್ಳವನು ನೀನು ಮೊರೆಹೊಕ್ಕವನು ನಾನು ಸಿರಿ ಕಾಗಿನೆಲೆಯಾದಿಕೇಶವನು ನೀನು ||5||

Thoughts & Reflections

0

No reflections shared yet. Be the first to share your thoughts!

Share your thought