Bhasaka
← Back to home

ಏನೆಂದು ನುಡಿವೆ ನಿನ್ನವರಂತೆ

Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ರೂಪಕತಾಳ
ಏನೆಂದು ನುಡಿವೆ ನಿನ್ನವರಂತೆ ಕೇಡು ಬುದ್ಧಿ ಎನ್ನೊಳಗಿಲ್ಲ- ಗುಣ ಹೀನರಲ್ಲದ ಈ ನರರ ಪಾಲಿಪ ಬುದ್ಧಿ ನಿನ್ನೊಳಗಿಲ್ಲ ||ಪ|| ತರಳ ಪ್ರಹ್ಲಾದನಂದದಿ ನಿನ್ನ ರೂಪನು ಕೆಡಿಸಲಿಲ್ಲ ನರನಂತೆ ಬಂಡಿ ಬೋವನ ಮಾಡಿ ನಿನ್ನ ದುಡಿಸಲಿಲ್ಲ ಪರಾಶರನಂತೆ ನದಿಯೊಳಿದ್ದ ಹೆಣ್ಣ ಕೂಡಲಿಲ್ಲ ಗರುಡನಂದದಿ ನಿನ್ನ ಪೊತ್ತು ತಿರುಗಲಿಲ್ಲ ||1|| ಸನಕಾದಿ ಮುನಿಯಂತೆ ವನದೊಳು ಅನುದಿನ ಚರಿಸಲಿಲ್ಲ ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ತಿನಿಸಲಿಲ್ಲ ಇನಕುಲ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ ಘನ ಪಾತಕದಜಮಿಳನಂತೆ ನಾರಗ ಎನ್ನಲಿಲ್ಲ ||2|| ಕದನದೊಳು ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲ ವಿದುರನ ತೆರನಂತೆ ಸದನವ ಮುರಿದು ನಿನ್ನ ಬೆರೆಯಲಿಲ್ಲ ಮದಗಜದಂತೆ ಮಕರಿಗೆ ಸಿಲ್ಕಿ ಒರಲಲಿಲ್ಲ ಗದರಿ ಶಿಶುಪಾಲನಂದದಿ ನಿನ್ನನುಪೇಕ್ಷಿಸಿ ಜರೆಯಲಿಲ್ಲ ||3|| ಬುವಿಯೊಳು ಬಲಿಯಂತೆ ದಾನವ ನೀಡಲಿಲ್ಲ ಭವನಂತೆ ಶ್ಮಶಾನದಿ ಮನೆ ಮಾಡಿ ಸ್ಮರಿಸಲಿಲ್ಲ ತವ ಪುಂಡರೀಕನಂತೆ ಹಲಗೆಯಿಟ್ಟಿಗೆ ಮೇಲೆ ನಿಲ್ಲಿಸಲಿಲ್ಲ ಭುವನದೊಡೆಯ ನೆಲೆಯಾದಿಕೇಶವನ ಮರೆಯಲಿಲ್ಲ ||4||

Thoughts & Reflections

0

No reflections shared yet. Be the first to share your thoughts!

Share your thought