Bhasaka
← Back to home

ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ

Author: ಕನಕದಾಸCategory: ಶ್ರೀಕೃಷ್ಣRaaga: ಆರಭಿTaala: ಆದಿತಾಳ
ಕಣಿಯ ಹೇಳಲು ಬಂದೆ ನಾರಾಯಣನಲ್ಲದೆ ಇಲ್ಲವೆಂದು- ಮಿಕ್ಕ ಬಣಗು ದೈವದ ಗೊಡವೆ ಬೇಡ ನರಕ ತಪ್ಪದು ||ಪ|| ಎಕ್ಕನಾತಿಯರು ಕಾಟಿ ಜಕ್ಕಿ ಜಲಕನ್ಯೆಯರು ಸೊಕ್ಕಿನಿಂದ ಸೊಂಟ ಮುರುಕ ಬೈರೇದೇವರು ಮಿಕ್ಕ ಮಾರಿ ಮಸಣಿ ಚೌಡಿ ಮೈಲಾರಿ ಮೊದಲಾದ ಠಕ್ಕು ದೈವದ ಗೊಡವೆ ಬೇಡ ನರಕ ತಪ್ಪದು ||1|| ಸುತ್ತಣವರ ಮಾತ ಕೇಳಿ ಗುತ್ತಿಯ ಎಲ್ಲಮ್ಮಗೊಲಿದು ಬತ್ತಲೆಯೆ ದೇವರೆದುರು ಬರುವುದು ನೋಡಿರೊ ಮತ್ತೆ ಬೇವಿನುಡಿಗೆಯ ಅರ್ತಿಯಿಂದುಟುಗೊಂಡು ಮುಕ್ತಿ ಕಾಂಬೆವೆಂಬ ಮೌಢ್ಯ ಬೇಡಿರೊ ||2|| ತೂಳದವರ ಮಾತ ಕೇಳಿ ಖೂಳರೆಲ್ಲ ಕೂಡಿಕೊಂಡು ಹಾಳು ಮಾಡಿ ಕೈಯಲ್ಲಿದ್ದ ಹೊನ್ನು ಹಣಗಳ ಬಾಳುತಿಪ್ಪ ಕೋಣ ಕುರಿಯ ಏಳ ಬೀಳ ಕೊರಳ ಕೊಯ್ದು ಬೀಳ ಬೇಡಿ ನರಕಕೆಂದು ಹೇಳ ಬಂದೆನೊ ||3|| ಹೊಳ್ಳದ ಬಿಚ್ಚೇರು ಸಹಿತ ಸುಳ್ಳರೆಲ್ಲ ಕೂಡಿಕೊಂಡು ಬೆಳ್ಳನ ಬೆಳತನಕ ನೀರ ತಡಿಯಲಿ ಕುಳಿತು ಗುಳ್ಳೆ ಗೊರಜೆ ಕೂಡಿ ತಿಂದು ಕಳ್ಳುಕೊಡನ ಬರಿದು ಮಾಡುವಂಥ ಪೊಳ್ಳುದೈವದ ಗೊಡವೆ ಬೇಡ ನರಕ ತಪ್ಪದು ||4|| ಪೊಡವಿಗಧಿಕ ವಿಜಯನಗರದೊಡೆಯ ಕಟ್ಟೆ ವೆಂಕಟೇಶ ಕಡು ಚೆಲ್ವ ಕಟ್ಟಾಣಿ ಕನಕನೊಡೆಯ ಬಡದಾದಿ ಕೇಶವನ ಪಾದ ಬಿಡದೆ ಭಜಿಸಿರೊ ಜಡದೈವಗಳ ಇಂಥ ಪೂಜೆ ಬೇಡ ಕಾಣಿರೋ ||5||

Thoughts & Reflections

0

No reflections shared yet. Be the first to share your thoughts!

Share your thought