Bhasaka
← Back to home

ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ

Author: ಕನಕದಾಸCategory: ಇತರೆRaaga: ಕಲ್ಯಾಣೀTaala: ಆಟತಾಳ
ಕಲಿ ಹೆಚ್ಚಿ ಬಂದಿತಲ್ಲ, ರಂಗಯ್ಯ, ಕಾಯೆನ್ನ ಸಿರಿಯ ನಲ್ಲ||ಪ|| ಬಲು ಘೋರ ಪಾತಕದಿ ಇಳೆಯು ತಲ್ಲಣಗೊಂಡು ಕಳವಳಿಸುತಿದೆ ಕಾಲ ವಿಪರೀತದಿ ||ಅ|| ಅತ್ತೆಯ ಸೊಸೆ ಬೈವಳು- ಪುತ್ರರು ತಮ್ಮ ಹೆತ್ತ ತಾಯಿಯ ಬಿಡುವರು ಉತ್ತಮ ಗರತಿಗೆ ಅಪವಾದ- ಅವಿವೇಕಿಗಳು ಎತ್ತ ನೋಡಲು ಹೆಚ್ಚಿ ಹೆದರಿಸಿತು ನ್ಮತ್ತತನದಲಿ ಮನೆಯ ರಚಿಸುವರು ಭಕ್ತಿಯೆಂಬುದ ಬಯಸದಿರುವರು ಕತ್ತಲಾಯಿತು ಕಲಿಯ ಮಹಿಮೆ ||1|| ನಿತ್ಯನೇಮವು ನಿಂತಿತು- ಹೋಯಿತಲ್ಲ ಜಾತಿಗೈಶ್ವರ್ಯ ಭೋಗಭಾಗ್ಯ ದಾತರಾದವರಿಗೆ ಧಾರಣೆ ಪಾರಣೆ ಜಾತಿನೀತಿಗಳೆಲ್ಲ ಒಂದಾಗಿ ಪಾತಕದಿ ಮನವೆರಗಿ ಮೋಹಿಸುತ ಮಾತಾಪಿತೃ ಗುರುದೈವ ದ್ರೋಹದಿ ಭೂತಳವು ನಡುನಡುಗುತಿಹುದು ||2|| ಬಿನ್ನಣ ಮಾತುಗಳು ಮತ್ತೆ ಮತ್ತೆ ಘನ್ನ ಮತ್ಸರ ಕ್ರೋಧಗಳು ಅನ್ಯಾಯದಿಂದ ಅರ್ಥವ ಗಳಿಸುವರು ತನ್ನ ಕಾಂತನ ಬಿಟ್ಟು ಸ್ತ್ರೀಯರು ಅನ್ಯರಿಗೆ ಮನವೆರಗಿ ಮೋಹಿಪರು ಬಣ್ಣಗೆಟ್ಟಿತು ವರ್ಣ ತಪ್ಪಿತು ಪ್ರ ಸನ್ನ ಶ್ರೀ ನೆಲೆಯಾದಿ ಕೆಶವನೆ ||3||

Thoughts & Reflections

0

No reflections shared yet. Be the first to share your thoughts!

Share your thought